ADVERTISEMENT

ಕೊಪ್ಪಳ | ಬರದ ಊರುಗಳಲ್ಲಿ ‘ಜಲ ತರಂಗ’

ಕೆರೆ ತುಂಬಿಸುವ ಯೋಜನೆ; ಕೊಪ್ಪಳ ಜಿಲ್ಲೆಗೆ ವರವಾದ ಕೃಷ್ಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 5:17 IST
Last Updated 17 ಡಿಸೆಂಬರ್ 2024, 5:17 IST
ಕುಷ್ಟಗಿ ತಾಲ್ಲೂಕಿನ ಶಾಖಾಪುರ ಕೆರೆಯಲ್ಲಿ ನೀರು ಧುಮ್ಮಿಕ್ಕುತ್ತಿರುವುದು
ಕುಷ್ಟಗಿ ತಾಲ್ಲೂಕಿನ ಶಾಖಾಪುರ ಕೆರೆಯಲ್ಲಿ ನೀರು ಧುಮ್ಮಿಕ್ಕುತ್ತಿರುವುದು   

ಕುಷ್ಟಗಿ: ಮೋಡವಿಲ್ಲ, ಮಳೆಯೂ ಇಲ್ಲ. ಆದರೂ ಬತ್ತಿದ ಹಳ್ಳಗಳಲ್ಲಿ ಜುಳುಜುಳು ನಿನಾದ. ಕೆರೆಗಳು, ಕೃಷಿ ಹೊಂಡಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ. ಹರಿವ ನೀರಲ್ಲಿ ಪ್ರಾಣಿ ಪಕ್ಷಿಗಳ ಸ್ವಚ್ಛಂದ ವಿಹಾರ.

ಹೌದು, ಇವು ಕಥೆ, ಕವನದ ಸಾಲುಗಳಲ್ಲ. ತಾಲ್ಲೂಕಿನ ಶಾಖಾಪುರ, ಮದಲಗಟ್ಟಿ ಮತ್ತಿತರೆ ಪ್ರದೇಶಗಳ ವ್ಯಾಪ್ತಿಯಲ್ಲಿ ನೀಲಾಕಾರದ ಜೀವಜಲ ಓಲಾಡುವ ದೃಶ್ಯ. ಇದಕ್ಕೆಲ್ಲ ಕಾರಣ ಕೃಷ್ಣೆಯ ಕೃಪೆ.

ಕೃಷ್ಣಾ ಬಿ ಸ್ಕೀಂ ಯೋಜನೆಯಲ್ಲಿ ರೈತರ ಹೊಲಗಳಿಗೆ ಇನ್ನೂ ನೀರು ಬಂದಿಲ್ಲವಾದರೂ ಯೋಜನೆಯ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಲ್ಲಿ ಬರದ ನಾಡಿನ ಕೆರೆಗಳಲ್ಲಿ ಜೀವಜಲ ಧುಮ್ಮಿಕ್ಕುತ್ತಿದೆ. ಕೆರೆಗಳ ಆಸುಪಾಸಿನ ಹಳ್ಳಿಗಳ ರೈತರು, ಜನರ ಸಂತಸಕ್ಕೆ ಪಾರವೇ ಇಲ್ಲ. ತಾಲ್ಲೂಕಿನ ಜೊತೆಗೆ ಪಕ್ಕದ ಯಲಬುರ್ಗಾ, ಕನಕಗಿರಿ ತಾಲ್ಲೂಕಿನ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

ADVERTISEMENT

‘ಕೃಷ್ಣಾ ಭಾಗ್ಯ ಜಲ ನಿಗಮ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ತಾಲ್ಲೂಕಿನ ಹೂಲಗೇರಾ ಶಾಖೆಯ 10 ಕೆರೆಗಳ ಪೈಕಿ 9, ಹನುಮಸಾಗರ ಶಾಖೆಯ ಯಲಬುಣಚಿ, ಕಲಾಲಬಂಡಿ ಶಾಖೆಯ ಶಾಖಾಪುರ ಸೇರಿದಂತೆ ಬಹುತೇಕ ಕೆರೆಗಳಿಗೆ ನೀರು ಹರಿಯುತ್ತಿದೆ. ವಿದ್ಯುತ್‌ ಇತರೆ ತಾಂತ್ರಿಕ ಅಡೆತಡೆ ಹೊರತುಪಡಿಸಿದರೆ ಕಳೆದ ಒಂದು ವಾರದಿಂದಲೂ ಸತತವಾಗಿ ನೀರು ಹರಿದುಬರುತ್ತಿದೆ’ ಎಂದು ಹೂಲಗೇರಾ ಬ್ರಾಂಚಿನ ಕೆಬಿಜೆಎನ್‌ಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ನಾಯಕ ವಿವರಿಸಿದರು.

ಆಲಮಟ್ಟಿ, ನಾರಾಯಣಪುರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಕೊಪ್ಪಳ ಜಿಲ್ಲೆಯ ಅನೇಕ ತಾಲ್ಲೂಕುಗಳಿಗೂ ವರದಾನವಾಗಿದೆ. ತಾಲ್ಲೂಕಿನ 18 ಕೆರೆಗಳಿಗೆ ಸದ್ಯ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ಬಹುತೇಕ ಕೆರೆಗಳಿಗೆ ಕಳೆದ ಒಂದು ವಾರದಿಂದಲೂ ನೀರು ಹರಿದು ಬರುತ್ತಿದೆ. ಕೆರೆಗಳೆಲ್ಲ ತುಂಬಿ ತುಳುಕುತ್ತಿವೆ. ಹೆಚ್ಚುವರಿ ನೀರು ಹಳ್ಳಗಳ ಮೂಲಕ ಹರಿಯುತ್ತಿದ್ದು ಮಳೆ ಇಲ್ಲದಿದ್ದರೂ ಹಳ್ಳಗಳಲ್ಲಿ ಜೀವಕಳೆ ಉಕ್ಕುತ್ತಿರುವ ಕುರಿತು ರೈತರು ಸಂತಸ ಹಂಚಿಕೊಂಡರು.

ಕೃಷಿ ಹೊಂಡದಲ್ಲಿ ಕಂಡುಬರುವ ಜಲರಾಶಿ
ಕೃಷ್ಣಾ ನೀರಿನಿಂದ ಹಳ್ಳಕ್ಕೆ ಜೀವಕಳೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಈ ಭಾಗದಲ್ಲಿ ನೀರು ಅಪರೂಪವಾಗಿತ್ತು ಹಳ್ಳಗಳಲ್ಲಿ ನೀರು ರಭಸವಾಗಿ ಹರಿಯುತ್ತಿರುವುದನ್ನು ನಂಬಲಿಕ್ಕೂ ಅಸಾಧ್ಯವಾಗಿದೆ. ಸರ್ಕಾರದ ಈ ಯೋಜನೆಯಿಂದ ರೈತರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ
ಕಾಳಪ್ಪ.ಎಂ.ಬಡಿಗೇರ ಶಾಖಾಪುರ ರೈತ
ಹಿರೇನಂದಿಹಾಳ ಕೆರೆಗೆ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಹರಿವಿನ ಪ್ರಮಾಣ ಹೆಚ್ಚಿಸಲು ಕೆಬಿಜೆಎನ್‌ಎಲ್‌ ಕ್ರಮ ಕೈಗೊಳ್ಳಲಿ
ಶರಣಪ್ಪ ಕುರ್ನಾಳ ಪರಸಾಪುರ ರೈತ

ಭರ್ತಿಯಾಗಿರುವ ಕೃಷಿಹೊಂಡಗಳು

ಕೇವಲ ಕೆರೆಗಳಿಗಷ್ಟೇ ಅಲ್ಲ ತಾಲ್ಲೂಕಿನಲ್ಲಿ ಅನೇಕ ರೈತರು ತಮ್ಮ ಜಮೀನುಗಳಲ್ಲಿ ತೆಗೆಯಿಸಿರುವ ಕೃಷಿಹೊಂಡಗಳೂ ಭರ್ತಿಯಾಗಿವೆ. ಇದು ಅಂತರ್ಜಲ ಮರುಪೂರಣಕ್ಕೂ ಕಾರಣವಾಗಿದ್ದು ಬತ್ತಿದ್ದ ಕೊಳವೆಬಾವಿಗಳಲ್ಲೂ ಜೀವಜಲ ಉಕ್ಕುತ್ತಿದೆ. ಅನಾಯಾಸವಾಗಿ ಹರಿದು ಬರುತ್ತಿರುವ ನೀರು ಸದ್ಬಳಕೆ ಮಾಡಿಕೊಳ್ಳುತ್ತಿರುವ ರೈತರು ಹೊಂಡಗಳನ್ನು ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಲ್ಲದೆ ಕೆಲ ರೈತರು ಹಳ್ಳಗಳಿಗೆ ಪಂಪ್‌ಸೆಟ್‌ ಇಟ್ಟು ನೀರು ಹರಿಸಿಕೊಳ್ಳುತ್ತಿದ್ದಾರೆ. ಶೇಂಗಾ ಮೆಕ್ಕೆಜೋಳ ಹಣ್ಣು ತರಕಾರಿ ಬೆಳೆಗಳಿಗೆ ಕೃಷ್ಣಾ ನದಿ ನೀರು ಬಹಳಷ್ಟು ಆಸರೆಯಾಗಿದೆ. ಬರುವ ಬೇಸಿಗೆ ಅವಧಿಯ ಬೆಳೆಗಳಿಗೆ ನೀರಿನ ಆಸರೆಯಾಗುವ ವಿಶ್ವಾಸವಿದೆ ಎಂದು ರೈತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.