ADVERTISEMENT

ಬದುಕಿಗೆ ಕಂಪು ತಂದ ‘ಸುಗಂಧರಾಜ’ ಕೃಷಿ

ಅಡಿವೆಪ್ಪ ಆಚಾರಿಯವರ ಮಾದರಿ ಬೇಸಾಯ: 30 ಗುಂಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆ

ನಾರಾಯಣರಾವ ಕುಲಕರ್ಣಿ
Published 6 ಆಗಸ್ಟ್ 2019, 20:00 IST
Last Updated 6 ಆಗಸ್ಟ್ 2019, 20:00 IST
ಕುಷ್ಟಗಿಯ ಅಡಿವೆಪ್ಪ ಆಚಾರಿ ಅವರ ಜಮೀನಿನಲ್ಲಿ ಬೆಳೆದಿರುವ ಸುಗಂಧರಾಜ ಹೂವಿನ ಬೆಳೆ
ಕುಷ್ಟಗಿಯ ಅಡಿವೆಪ್ಪ ಆಚಾರಿ ಅವರ ಜಮೀನಿನಲ್ಲಿ ಬೆಳೆದಿರುವ ಸುಗಂಧರಾಜ ಹೂವಿನ ಬೆಳೆ   

ಕುಷ್ಟಗಿ: ಸುಗಂಧರಾಜ ಹೂವು ಬೆಳೆಯುವ ಮೂಲಕ ಪಟ್ಟಣದ ಅಡಿವೆಪ್ಪ ಆಚಾರಿ ಎಂಬ ರೈತ ತಮ್ಮ ಜಮೀನಿನಲ್ಲಿ ಬರ ಪರಿಸ್ಥಿತಿಯಲ್ಲೂ ಉತ್ತಮ ಸಾಧನೆ ಮಾಡಿದ್ದು ಪುಷ್ಪ ಕೃಷಿ ಅವರ ಕುಟುಂಬದ ಬದುಕಿನಲ್ಲಿ ಕಂಪು ಮೂಡಿಸಿದೆ.

ಪಟ್ಟಣದಿಂದ ಶಾಖಾಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಸುಗಂಧರಾಜ ಪುಷ್ಪ ಬೇಸಾಯದ ತೋಟ ದಾರಿಹೋಕರ ಗಮನಸೆಳೆ ಯುತ್ತಿದೆ. ಗಿಡದ ತುಂಬ ಹೂವುಗಳು ತುಂಬಿ ಸುತ್ತಲಿನ ವಾತಾವರಣವನ್ನು ಸುವಾಸನೆ ಹರಡಿಸುತ್ತಿರುವುದು ಮನಕ್ಕೆ ಮುದ ನೀಡುವಂತಿದೆ.

ಪ್ರಾರಂಭದಲ್ಲಿ ಎಲ್ಲರಂತೆ ಇವರೂ ಸಹ ಮೆಕ್ಕೆಜೋಳ, ಸಜ್ಜೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರೂ ಮಾಡಿದ ಖರ್ಚು ಕೈಗೆಟಕುತ್ತಿರಲಿಲ್ಲ. ಹಾಗಾಗಿ ಕಡಿಮೆ ನೀರು ಮತ್ತು ಕಡಿಮೆ ವಿಸ್ತೀರ್ಣದ ಜಮೀನಿನಲ್ಲಿ ಪುಷ್ಪಬೇಸಾಯ ಕೈಗೊಂಡರೆ ಹೇಗೆ ಎಂಬ ಆಲೋಚನೆಯಲ್ಲಿದ್ದಾಗ ಅವರಿಗೆ ಹೊಳೆದದ್ದು ಸುಗಂಧರಾಜ ಹೂವಿನ ಬೆಳೆ.

ADVERTISEMENT

ಕೇವಲ 30 ಗುಂಟೆ ಪ್ರದೇಶದಲ್ಲಿ ವರ್ಷದ ಹಿಂದಷ್ಟೆ ಈ ಹೂವಿನ ಸಸಿಗಳನ್ನು ನಾಟಿ ಮಾಡಿದ್ದು ಐದು ತಿಂಗಳ ನಂತರ ನಿರಂತರ ಹೂವು ಕೊಯಿಲು ಮಾಡುತ್ತಿದ್ದಾರೆ. ಮೊದಲೇ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕುಷ್ಟಗಿ ಹಾಗೂ ಹೊಸಪೇಟೆ ಹೂವಿನ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ದರ ಏನೇ ಇದ್ದರೂ ಇವರ ಸುಗಂಧರಾಜ ಹೂವುಗಳನ್ನು ಕೆ.ಜಿಗೆ 50ರ ದರದಲ್ಲಿ ಖರೀದಿಸುತ್ತಿದ್ದಾರೆ.

ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಹಾಗೂ ಗೇಣು ಅಂತರದಲ್ಲಿ ದಟ್ಟವಾಗಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಮೂವತ್ತು ಗುಂಟೆ ಪ್ರದೇಶದಲ್ಲಿ ಪ್ರತಿ 50 ಕೆ.ಜಿಗೆ 1000 ದರದಂತೆ ಸುಮಾರು 15000 ಹಣ ಕೊಟ್ಟು ಹೂವಿನ ಸಸಿಗಳ ಗಡ್ಡೆ ಖರೀದಿಸಿದ್ದು ನಾಟಿ ವೆಚ್ಚ ಸೇರಿ ಪ್ರಾರಂಭದಲ್ಲಿ 20 ಸಾವಿರ ಖರ್ಚಾಗಿದೆ. ಸಸಿಗಳು ಉತ್ತಮವಾಗಿ ಬೆಳೆದಿದ್ದು ಈಗ ಪ್ರತಿದಿನ 30–35 ಕೆ.ಜಿ ಹೂವುಗಳು ಬರುತ್ತಿವೆ. ಕೂಲಿ ಇತರೆ ಖರ್ಚು ಹೊರತುಪಡಿಸಿದರೆ ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ ₹ 1000 ಕೈಗೆ ಬರುತ್ತದೆ. ಮಳೆಗಾಲದಲ್ಲಿ ಗರಿಷ್ಠ 45 ಕೆ.ಜಿಯವರೆಗೂ ಹೂವಿನ ಇಳುವರಿ ಬರುತ್ತದೆ. ಮನೆಯವರು ಸೇರಿ ಬೆಳಗಿನ ಅವಧಿಯಲ್ಲಿ ನಿತ್ಯ ಐದು ಜನರಿಗೆ ನಿಶ್ಚಿತ ಕೆಲಸ ದೊರೆಯುತ್ತದೆ ಎನ್ನುತ್ತಾರೆ ರೈತ ಮಹಿಳೆ ರೇಣಮ್ಮ ಆಚಾರಿ.

ಇವರ ತೋಟದಲ್ಲಿ ಒಂದೆ ಕೊಳವೆಬಾವಿ ಇದ್ದು ನೀರಿನ ಪ್ರಮಾಣ ಕಡಿಮೆ ಇದೆ, ಒಂದು ಎಕರೆ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿ ಹತ್ತಿ ಮತ್ತು ಒಣಬೇಸಾಯದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಬೇಸಾಯಕ್ರಮ, ಕಾಲಕಾಲಕ್ಕೆ ಸಸ್ಯ ಸಂರಕ್ಷಣೆ ಕೆಲಸ ಕೈಗೊಳ್ಳುತ್ತಿದ್ದಾರೆ.

ಕಡಿಮೆ ನೀರಿನಲ್ಲಿ ಮತ್ತು ಸ್ವಲ್ಪ ಜಮೀನಿನಲ್ಲಿಯೂ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ಅಡಿವೆಪ್ಪ ಆಚಾರಿ ಅವರ ಪುಷ್ಪ ಕೃಷಿ
ಇತರರಿಗೂ ಮಾದರಿಯಾಗಿದೆ.

*
ನಿತ್ಯ ನಾಲ್ಕೈದು ಜನರಿಗೆ ಕೆಲಸ ನೀಡುವ ಪುಷ್ಪಕೃಷಿ ನಮ್ಮ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆ ತಂದಿದೆ.
-ರೇಣಮ್ಮ ಆಚಾರಿ, ರೈತ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.