
ಕೊಪ್ಪಳ: ‘ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಇದಾಗಿದ್ದು, ಕೊಪ್ಪಳ ನಗರದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪ್ರಸನ್ನ ಗಡಾದ ಹೇಳಿದರು.
ನಗರ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು,‘ಪಕ್ಷದ ಎಲ್ಲ ಹಿರಿಯರು ಸೇರಿ ನೀಡಿರುವ ಅಧಿಕಾರವನ್ನು ಜನರ ಹಾಗೂ ನಗರದ ಸೇವೆಗೆ ಮೀಸಲಿಡುವ ಕೆಲಸ ಮಾಡುತ್ತೇನೆ. ಪಕ್ಷದ ಹಿರಿಯರ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷರ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ,‘ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮುಖ್ಯ ರಸ್ತೆ ಹಾಗೂ ವೃತ್ತಗಳ ವಿಸ್ತರಣೆ ಆಗಬೇಕು’ ಎಂದು ಹೇಳಿದರು.
ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ,‘ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿರುವ ಸರಳ ವ್ಯಕ್ತಿ ಪ್ರಸನ್ನ ಗಡಾದ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ಅವರು ಅನುಭವ ಹಾಗೂ ಅವಕಾಶ ಬಳಸಿಕೊಂಡು ನಗರ ಅಭಿವೃದ್ಧಿ ಮಾಡಲಿ’ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಅಮ್ಜದ್ ಪಟೇಲ್, ಕಾಟನ್ ಪಾಷಾ, ಕೆ.ಎಂ.ಸೈಯದ್, ವಿ.ಆರ್.ಪಾಟೀಲ, ಕೃಷ್ಣ ಇಟ್ಟಂಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಿಕ್ಕ ಅವಧಿಯಲ್ಲಿ ಆದಷ್ಟು ಕೆಲಸ: ಗುಪ್ತಾ ‘ನನಗೆ ಸಿಕ್ಕ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೊಂಡಿದ್ದು ಯೋಜನೆಗಳು ಅನುಮೋದನೆ ಪಡೆದು ಡಿಪಿಆರ್ ಹಂತದಲ್ಲಿವೆ. ಶೀಘ್ರ ಟೆಂಡರ್ ಆಗಲಿವೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಗಮಿತ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದರು. ‘ಕಾಂಗ್ರೆಸ್ ಪಕ್ಷ ನೀಡಿದ್ದ ಅವಕಾಶದಲ್ಲಿ ಜನಸೇವೆ ಮಾಡಿರುವೆ. ಕಿನ್ನಾಳ ರಸ್ತೆಯ ಬಸವೇಶ್ವರ ಸರ್ಕಲ್ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.