ADVERTISEMENT

ಕುಕನೂರು | ಅಭಿವೃದ್ಧಿಗೆ ಮೊದಲ ಆದ್ಯತೆ: ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:12 IST
Last Updated 20 ಜನವರಿ 2026, 5:12 IST
ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು
ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು   

ಕುಕನೂರು: ‘ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಅಭಿವೃದ್ಧಿಯೇ ನನ್ನ ಮೂಲಮಂತ್ರ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ನಂಜೇರಿ, ವಟಪರ್ವಿ ಹಾಗೂ ಕುದರಿಮೋತಿ ಗ್ರಾಮಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

‘ರಾಜಕಾರಣಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಬೇಕು. ರಾಜ್ಯದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಯಾಗಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಆಹಾರ ಭದ್ರತೆ ಯೋಜನೆ ಜಾರಿ ಮಾಡಿದ್ದರಿಂದ ಎಲ್ಲರಿಗೂ ಉಚಿತ ಆಹಾರ ಧಾನ್ಯ ಸಿಕ್ಕು ಹಸಿವಿನಿಂದ ಬಳಲುವುದು ಕಡಿಮೆಯಾಗಿದೆ’ ಎಂದರು.

ADVERTISEMENT

‘ಮುಂದಿನ ತಿಂಗಳಿನಿಂದ 5 ಕೆ.ಜಿ ಅಕ್ಕಿ ಜೊತೆಗೆ 1 ಕೆ.ಜಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಉಪ್ಪು ಹಾಗೂ 1 ಕೆ.ಜಿ ಎಣ್ಣೆ ವಿತರಿಸಲಾಗುತ್ತದೆ’ ಎಂದು ಹೇಳಿದರು.

‘ಒಂದು ವರ್ಷದ ಅವಧಿಯಲ್ಲಿ 224 ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಅನುದಾನವನ್ನು ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ನಾನು ಮಂತ್ರಿ ಆಗದಿದ್ದರೂ ನನ್ನ ಮೇಲೆ ನಂಬಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ.  ಸಾರ್ವಜನಿಕರು ಅದರ ಸದ್ಬಳಕೆ ಪಡೆದುಕೊಳ್ಳಬೇಕು’ ಎಂದರು.

‘ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ ಅಸಹಕಾರ ಇದೆ. ಇದರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದೇನೆ. ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಯುಕೆಪಿ ಯೋಜನೆ ಹಾಗೇ ನಿಂತಿದೆ. ನೀರಾವರಿ ಭಾಷಣ ಯಾರಾದರೂ ಮಾಡಿದರೆ ಅವರ ಸ್ವಂತ ಊರಿಗೆ ನೀರಾವರಿ ಮಾಡಿಕೊಂಡಿದ್ದೀರಾ ಎಂದು ಮೊದಲು ಕೇಳಿ’ ಎಂದು ಟೀಕಿಸಿದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾ.ಪಂ ಇಒ ಸಂತೋಷ ಬಿರಾದಾರ ಪಾಟೀಲ, ಪಂಚಾಯತ್ ರಾಜ್ ಇಲಾಖೆ ಎಇಇ ರಾಜಶೇಖರ ಮಳಿಮಠ, ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಅಶೋಕ ತೋಟದ ಮತ್ತು ಸಂಗಮೇಶ ಗುತ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.