ಕುಕನೂರಿನ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕುಕನೂರು: ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗದಿರುವುದು ಈ ಭಾಗದ ವಿದ್ಯಾರ್ಥಿಗಳು ಮತ್ತು ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.
50 ಸಾವಿರ ಜನಸಂಖ್ಯೆ ಹೊಂದಿದ ಕುಕನೂರಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಆರು ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಪಕ್ಕದ ಬನ್ನಿಕೊಪ್ಪ, ಬಿನ್ನಾಳ, ಇಟಗಿ, ಮಸಬಹಂಚಿನಾಳ, ರಾಜೂರು ಗ್ರಾಮಗಳಲ್ಲಿ ಪಿಯು ಕಾಲೇಜು ಇವೆ. ಇವೆಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲೂ ಬಡವರು, ಹಿಂದುಳಿದ ಸಮುದಾಯದವರೇ ಹೆಚ್ಚಿದ್ದಾರೆ. ಆದರೆ, ಮುಂದಿನ ಹಂತದ ಕಲಿಕೆಗಾಗಿ ಅವರಿಗೆ ಸ್ಥಳೀಯವಾಗಿ ಸರ್ಕಾರಿ ವ್ಯವಸ್ಥೆ ಇಲ್ಲ.
ಹಾಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪಡೆಯಬೇಕೆಂದರೆ ದೂರದ ಯಲಬುರ್ಗಾ, ಕೊಪ್ಪಳ ನಗರಗಳಿಗೆ ನಿತ್ಯ 15ರಿಂದ 25 ಕಿ.ಮೀ ಕ್ರಮಿಸಿ ಪ್ರಯಾಣಿಸಬೇಕಿದೆ. ಇಲ್ಲವೆ ಓದನ್ನೇ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿ ಬಡ ಮಕ್ಕಳು, ಅದರಲ್ಲೂ ವಿದ್ಯಾರ್ಥಿನಿಯರು ಪಿಯು ಹಂತಕ್ಕೆ ಓದು ನಿಲ್ಲಿಸಿ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪಟ್ಟಣಕ್ಕೆ 2021ರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರಾಗಿದ್ದು, ಕಳೆದ 05 ವರ್ಷಗಳಿಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ತರಗತಿ ನಡೆಯುತ್ತಿವೆ. ಈಗ ಕಾಲೇಜಿನಲ್ಲಿ 224 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪಟ್ಟಣದಲ್ಲಿ ತ್ವರಿತವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
‘ಸ್ವಾತಂತ್ರ‍್ಯ ನಂತರದ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಸ್ಥಾನ ಪಡೆದ ಪಟ್ಟಣ. ಇಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸರ್ಕಾರ ಗಮನ ಹರಿಸದಿರುವುದು ಸರಿಯಲ್ಲ’ ಎಂದು ಸ್ಥಳೀಯರು ದೂರುತ್ತಾರೆ.
‘ಈ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಪರಿಗಣಿಸಬೇಕು. ಶೀಘ್ರವೇ ಕುಕನೂರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರುಗೊಳಿಸಬೇಕು. ಇಲ್ಲದಿದ್ದರೆ ಬೇರೆ ಕಡೆ ಕಡಿಮೆ ದಾಖಲಾತಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನಾದರೂ ಸ್ಥಳಾಂತರಿಸಬೇಕು’ ಎಂಬುದು ಅವರ ಆಗ್ರಹ.
ಇದ್ದ ಪದವಿ ಕಾಲೇಜು ರದ್ದತಿ:
ಕೆಲವು ವರ್ಷಗಳ ಹಿಂದೆ ಇದ್ದ ಪದವಿ ಕಾಲೇಜು ಅನಿವಾರ್ಯ ಕಾರಣಗಳಿಂದ ರದ್ದಾಗಿದ್ದು ಸರ್ಕಾರಿ ಪದವಿ ಸ್ವಂತ ಕಟ್ಟಡ ಇದ್ದು, ಈಗ ಅದು ಖಾಸಗಿ ಕೆಎಲ್ಇ ಸಂಸ್ಥೆಗೆ ನೀಡಲಾಗಿದೆ. ಅಲ್ಲಿ ಅನುದಾನ ರಹಿತ ಪಿಯು ಕಾಲೇಜು ನಡೆಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಸರ್ಕಾರಿ ಕಟ್ಟಡ ತೆರವುಗೊಳಿಸಿ ಪದವಿ ಕಾಲೇಜು ಪ್ರಾರಂಭಿಸಬೇಕು ಎಂಬುದು ಸ್ಥಳೀಯ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಯರಡ್ಡಿ ಅವರಿಗೆ ಹಲವು ಬಾರಿ ಫೋನ್ ಕರೆ ಮಾಡಿದಾಗ
ಸ್ವೀಕರಿಸಲಿಲ್ಲ.
ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲದಿರುವ ಕಾರಣ ನಾನು ಕೊಪ್ಪಳಕ್ಕೆ ಹೋಗಿ ಬಿ.ಕಾಂ ಓದುತ್ತಿದ್ದೇನೆ. ನಿತ್ಯ 45 ಕಿ.ಮೀ ಸಂಚರಿಸಬೇಕು.ರಮೇಶ್, ವಿದ್ಯಾರ್ಥಿ