ADVERTISEMENT

ಕುಕನೂರು ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್ ಇಲ್ಲದೆ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:11 IST
Last Updated 2 ಫೆಬ್ರುವರಿ 2026, 4:11 IST
ಕುಕನೂರು ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ ಬಂದ್‌ ಆಗಿರುವುದು
ಕುಕನೂರು ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ ಬಂದ್‌ ಆಗಿರುವುದು   

ಕುಕನೂರು: ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್‌ನಿಲ್ದಾಣದ ಕ್ಯಾಂಟೀನ್‌ ಕಳೆದ 10 ತಿಂಗಳಿಂದ ಬಂದ್‌ ಆಗಿದ್ದು, ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ, ಉಪಾಹಾರ, ಊಟಕ್ಕಾಗಿ ಬಸ್‌ನಿಲ್ದಾಣದ ಹೊರಗಿನ ಹೋಟೆಲ್‌ಗಳನ್ನು ಹುಡುಕಿ ಹೋಗುವಂತಾಗಿದೆ.

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಿದೆ.

ಬಸ್‌ ನಿಲ್ದಾಣದಲ್ಲಿನ ಕ್ಯಾಂಟೀನ್‌ ಬಂದ್‌ ಆಗಲು ದುಬಾರಿ ಬಾಡಿಗೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಬಾಡಿಗೆದಾರ ಮಾಸಿಕ ₹22,369 ಬಾಡಿಗೆಯಲ್ಲಿ ಕ್ಯಾಂಟೀನ್‌ ನೀಡಲಾಗಿತ್ತು. ವಿದ್ಯುತ್‌ ಬಿಲ್‌ ಹಾಗೂ ಇತರ ಖರ್ಚುಗಳು ಸೇರಿ ಮಾಸಿಕ ₹30 ಸಾವಿರ ವರೆಗೆ ಖರ್ಚು ತಗಲುತ್ತಿತ್ತು. ಹಿಂದಿನ ಬಾಡಿಗೆದಾರರು ಬಾಡಿಗೆ ಕಟ್ಟಲಾಗದೆ ಬೇರೆ ಕಡೆ ಹೋಗಿದ್ದಾರೆ.

ADVERTISEMENT

ಈಗಾಗಲೇ ಮೂರು ಬಾರಿ ಟೆಂಡರ್‌ ಕರೆದರೂ ದುಬಾರಿ ಬಾಡಿಗೆ ಹಿನ್ನೆಲೆಯಲ್ಲಿ ಯಾರೊಬ್ಬರೂ ಟೆಂಡರ್‌ ಹಾಕುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕ್ಯಾಂಟೀನ್‌ ಬಂದ್‌ ಆಗಿದ್ದರಿಂದ ಬೇರೆ ಗ್ರಾಮಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮನೆಯಿಂದ ಊಟ ಮಾಡಿಕೊಂಡು ಬರಬೇಕಿದೆ. ಇನ್ನು ಬಸ್‌ ನಿಲ್ದಾಣ ಸಮೀಪದಲ್ಲಿನ ಹೊಟೇಲ್‌ಗಳಿಗೆ ಹೋದರೆ ಬಸ್‌ ಕೈ ತಪ್ಪುತ್ತದೆ. ಈ ಕಾರಣಕ್ಕೆ ಪ್ರಯಾಣಿಕರು ನಿಲ್ದಾಣದಲ್ಲಿನ ಬೇಕರಿಗಳಲ್ಲಿ ತಿನಿಸುಗಳನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳು, ಕ್ಯಾಂಟೀನ್‌ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ಮರಿಚಿಕೆ: ನಿಲ್ದಾಣದಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ. ಎಷ್ಟೋ ಬಾರಿ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರು ಏನು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.

ತಾಲ್ಲೂಕಿನ ಕುಕನೂರು, ಬನ್ನಿಕೊಪ್ಪ, ಮಸಬ ಹಂಚಿನಾಳ, ಮಂಗಳೂರು ಹೀಗೆ ಪ್ರಮುಖ ಗ್ರಾಮಗಳ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್‌ಗಳು ಬಂದಾಗಿವೆ. ಉದ್ಘಾಟನೆ ಆದಗಿನಿಂದಲೂ ಪ್ರಾರಂಭವಾಗದೇ ಇರುವುದು ದುರಂತ.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ದುಬಾರಿ ಬಾಡಿಗೆಯನ್ನು ಕಡಿತಗೊಳಿಸಿ ಕಡಿಮೆ ಬಾಡಿಗೆಯಲ್ಲಿ ಕ್ಯಾಂಟೀನ್‌ಗಳನ್ನು ನೀಡಿದಾಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಪ್ರಯಾಣಿಕರು.

ಬಸ್‌ ನಿಲ್ದಾಣದಲ್ಲಿರುವ ಕ್ಯಾಂಟೀನ್‌ಗಳ ಬಾಡಿಗೆ ದುಬಾರಿಯಾಗಿದೆ ಎಂದು ಬಾಡಿಗೆದಾರರು ಹೇಳಿತ್ತಿದ್ದು ಬಾಡಿಗೆ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.
ಜಿ.ಸೀನಯ್ಯ ವಿಭಾಗಿಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ಕೊಪ್ಪಳ
ಕೆಲವು ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಂಟೀನ್ ಹಾಗೂ ಕುಡಿಯುವ ನೀರು ಪ್ರಾರಂಭಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು
ಶಂಕರ್ ಭಂಡಾರಿ ಸ್ಥಳೀಯ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.