ಕುಕನೂರು: ತಾಲ್ಲೂಕಿನ ಬಿನ್ನಾಳ ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವಿ ಕಳಕಪ್ಪ ಕಂಬಳಿ ಅವರು 42ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 472 (ಶೇ 78.66) ಅಂಕ ಪಡೆದು ಗಮನ ಸೆಳೆದಿದ್ದಾರೆ.
ಮಹಾದೇವಿ ಕಳಕಪ್ಪ ಅವರಿಗೆ ನಾಲ್ವರು ಮಕ್ಕಳಿದ್ದು, ಮಗಳು ಎಂಜಿನಿಯರಿಂಗ್, ಎಲ್‌ಎಲ್‌ಬಿ ಓದುತ್ತಿದ್ದು, ಮತ್ತೊಬ್ಬ ಮಗ ಪದವಿ ಓದುತ್ತಿದ್ದು, ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಕೊನೆಯ ಮಗಳ ಜತೆ ತಾಯಿ ಕೂಡ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
‘20 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದು, ಮಕ್ಕಳ ಒತ್ತಾಯದ ಮೇರೆಗೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದೆ’ ಎಂದು ಮಹಾದೇವಿ ಕಳಕಪ್ಪ ಅವರು ತಿಳಿಸಿದರು.
15 ವರ್ಷಗಳ ನಂತರ ಪಿಯು ಪಾಸಾದ ಗೃಹಿಣಿ: ತಾಲ್ಲೂಕಿನ ಇಟಗಿ ಗ್ರಾಮದ ಸರೋಜಾ ಶಿವರಾಜ ನರೇಗಲಮಠ ಎಂಬುವವರು ಮದುವೆಯಾದ 15 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ತಾಲ್ಲೂಕಿನ ಮಸಬಹಂಚಿನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದ ಸರೋಜಾ ಅವರು, ಪ್ರಥಮ ವರ್ಷದ ಪಿಯುಸಿಯಲ್ಲಿದ್ದಾಗಲೇ ಮದುವೆ ಮಾಡಿದ್ದರಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.
‘ದೀರ್ಘ ಅವಧಿಯ ನಂತರ ಪರೀಕ್ಷೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಪಠ್ಯಕ್ರಮಗಳೆಲ್ಲವೂ ಬದಲಾಗಿದ್ದು ಹೊಸ ಪಠ್ಯಕ್ರಮ ಸುಲಭವಾಗಿ ಅರ್ಥವಾಗದೇ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೂ ಪಾಸಾಗಲೇಬೇಕು ಎಂಬ ಹಂಬಲದಿಂದ ಕುಟುಂಬಸ್ಥರ ಸಹಕಾರದಿಂದ ಪರೀಕ್ಷೆ ಬರೆದು ಯಶಸ್ವಿಯಾಗಿದ್ದೇನೆ’ ಎಂದು ಸರೋಜಮ್ಮ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.