ADVERTISEMENT

ಹನುಮಸಾಗರ | ದಶಕದ ಹಿಂದೆ ನಡೆದಿದ್ದ ಬೈಕ್‌ ಅಪಘಾತ: ಸವಾರನಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:13 IST
Last Updated 9 ಜನವರಿ 2026, 7:13 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಕುಷ್ಟಗಿ: ನಿರ್ಲಕ್ಷ್ಯತನದಿಂದ ಬೈಕ್‌ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಬೈಕ್‌ ಸವಾರನಿಗೆ ಇಲ್ಲಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಮಹಾಂತೇಶ ಚೌಳಗಿ ಅವರು ₹ 8,000 ದಂಡ ಸಹಿತ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

2015ರ ಮೇ 1 ರಂದು ಹನುಮಸಾಗರ-ಗಜೇಂದ್ರಗಡ ರಸ್ತೆಯ ಯಲಬುಣಚಿ ಕ್ರಾಸ್‌ ಬಳಿ ರೋಣ ತಾಲ್ಲೂಕು ಸೂಡಿ ಗ್ರಾಮದ ಸುರೇಶ ಕುಲಕರ್ಣಿ ಎಂಬ ಬೈಕ್‌ ಸವಾರನು ಹನುಮಸಾಗರಕ್ಕೆ ಹೊರಟಿದ್ದ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸುಬಾನ್‌ಸಾಬ್‌ ಎಂಬುವವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಅಲ್ಲದೇ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಈ ಕುರಿತ ಪ್ರಕರಣ ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.

ADVERTISEMENT

ದಂಡದ ಮೊತ್ತದಲ್ಲಿ ₹ 5,000 ಹಣವನ್ನು ಬಾಧಿತ ವ್ಯಕ್ತಿಗೆ ಪರಿಹಾರ ರೂಪದಲ್ಲಿ ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿಸುವಂತೆ ತೀರ್ಪಿನಲ್ಲಿ ವಿವರಿಸಲಾಗಿದೆ. ಸರ್ಕಾರದ ಹೆಚ್ಚುವರಿ ವಕೀಲೆ ಇಂದಿರಾ ಸುಹಾಸಿನಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಹನುಮಸಾಗರ ಪೊಲೀಸ್‌ ಠಾಣೆಯ ಮಲ್ಲಪ್ಪ ಹಾಗೂ ಚಂದ್ರಶೇಖರ ಅವರು ಸಾಕ್ಷಿಗಳನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.