ADVERTISEMENT

ಕುಷ್ಟಗಿ: ಮಕ್ಕಳಿಲ್ಲದೆ ಭಣಗುಡುತ್ತಿವೆ ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆಗಳು ಸವಲತ್ತಿನಲ್ಲಿ ಮುಂದೆ, ಶಿಕ್ಷಣದಲ್ಲಿ ಹಿಂದೆ? l ಖಾಸಗಿ ಶಾಲೆಗಳತ್ತ ಪಾಲಕರ ಚಿತ್ತ

ನಾರಾಯಣರಾವ ಕುಲಕರ್ಣಿ
Published 12 ಜೂನ್ 2025, 5:10 IST
Last Updated 12 ಜೂನ್ 2025, 5:10 IST
ಕುಷ್ಟಗಿಯ ಇಂದಿರಾ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆಯಿಂದ ಭಣಗುಡುತ್ತಿರುವುದು
ಕುಷ್ಟಗಿಯ ಇಂದಿರಾ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆಯಿಂದ ಭಣಗುಡುತ್ತಿರುವುದು   

ಕುಷ್ಟಗಿ: ಅಗತ್ಯ ಕೊಠಡಿಗಳು, ಆಟದ ಮೈದಾನ ಇದೆ. ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಎಲ್ಲವೂ ಉಚಿತವಾಗಿಯೇ ನೀಡಲಾಗುತ್ತಿದೆ. ಅನುಭವಿ ಶಿಕ್ಷಕರೂ ಇದ್ದಾರೆ. ಆದರೆ, ಮಕ್ಕಳ ಕಲರವ ಮಾತ್ರ ಇಲ್ಲ!

ಹೌದು, ಪಟ್ಟಣದ ಕೆಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮಕ್ಕಳ ದಾಖಲಾತಿ ಕೊರತೆಯಿಂದ ಭಣಗುಡುತ್ತಿವೆ! ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಕ್ಕಪಕ್ಕದಲ್ಲೇ ಇರುವ ಖಾಸಗಿ ಶಾಲೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಮಕ್ಕಳಿಂದ ಕೊಠಡಿಗಳು ತುಂಬಿ ತುಳುಕುತ್ತಿರುವುದು ವಿಪರ್ಯಾಸದ ಸಂಗತಿ.

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಶಾಲಾ ಶಿಕ್ಷಣ ಇಲಾಖೆ ದಾಖಲಾತಿ ಆಂದೋಲನ ನಡೆಸುತ್ತಿದೆ. ಅಷ್ಟೇ ಏಕೆ ಪಾಲಕರ ಮನೆ ಬಾಗಿಲು ತಟ್ಟುತ್ತಿರುವ ಶಿಕ್ಷಕರು ‘ದಯವಿಟ್ಟು ಮಕ್ಕಳನ್ನು ನಮ್ಮ ಶಾಲೆಗೆ ಕಳಿಸಿ’ ಎಂದು ಮನವರಿಕೆ ಮಾಡಿ ಕೈಮುಗಿತ್ತಿದ್ದಾರೆ. ಇಷ್ಟಾದರೂ 1-5ನೇ ತರಗತಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ. ಬಹುತೇಕ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ 50 ದಾಟಿಲ್ಲ ಎಂಬುದು ಗಮನಾರ್ಹ.

ADVERTISEMENT

ಎಲ್ಲೆಲ್ಲಿ ಕಡಿಮೆ ಸಂಖ್ಯೆ?:

ಪಟ್ಟಣದ ಇಂದಿರಾ ನಗರದ ಶಾಲೆಗೆ ಬುಧವಾರ ಭೇಟಿ ನೀಡಿದಾಗ ಈ ವರ್ಷದ ದಾಖಲಾತಿ 30 ಇದ್ದರೆ ಮಕ್ಕಳ ಹಾಜರಾತಿ ಕೇವಲ 18 ಇತ್ತು. ಈ ಶಾಲೆಯಲ್ಲಿ ಕಳೆದ ಐದಾರು ವರ್ಷಗಳಿಂದಲೂ ಮಕ್ಕಳ ದಾಖಲಾಗಿ ಸಂಖ್ಯೆ 30ರ ಒಳಗೆ ಇದೆ.

‘1997ರಲ್ಲಿ ಆರಂಭವಾದ ಈ ಶಾಲೆಗೆ ಮಕ್ಕಳೇ ಬಾರದಿದ್ದರೆ ಈ ಶಾಲೆ ಮುನ್ನಡೆಸುವ ಅಗತ್ಯವಿದೆಯೆ ಎಂಬ ಪ್ರಶ್ನೆ ಶಿಕ್ಷಣ ಇಲಾಖೆಯ ಮುಂದಿದೆ. ಅದೇ ರೀತಿ ಹನುಮಸಾಗರ ರಸ್ತೆ ಆಶ್ರಯ ಬಡಾವಣೆಯ ಶಾಲೆಯಲ್ಲಿ 28, ಅನ್ನದಾನದೇಶ್ವರ ನಗರದ ಶಾಲೆಯಲ್ಲಿ 27, 12ನೇ ವಾರ್ಡ್‌ನ ತೆಗ್ಗಿನ ಓಣಿ ಶಾಲೆಯಲ್ಲಿ 40 ಹಾಗೂ ಮೂರು ಜನ ಶಿಕ್ಷಕರಿರುವ ಸಂದೀಪ್‌ ನಗರ ಆಶ್ರಯ ಕಾಲೊನಿ ಶಾಲೆಯಲ್ಲಿ 50 ಮಕ್ಕಳ ದಾಖಲಾತಿ ಇದ್ದರೂ, ಹಾಜರಾತಿ ಮಾತ್ರ ಅರ್ಧದಷ್ಟೇ ಇರುತ್ತದೆ’ ಎಂದು ಮೂಲಗಳು ತಿಳಿಸಿವೆ.

‘ಎಲ್ಲವೂ ಉಚಿತವಾಗಿರುವ ಸರ್ಕಾರಿ ಶಾಲೆಗಳ ಬದಲು ಪಾಲಕರು ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಸೇರಿಸಿಕೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ. ಆದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ಟಿಇಟಿ ತೇರ್ಗಡೆಯಾಗದ ಬೋಧಕರಿದ್ದಾರೆ. ಆದರೂ ಸರ್ಕಾರಿ ಶಾಲೆಗಳತ್ತ ಪಾಲಕರು ನಿರೀಕ್ಷೆಯಷ್ಟು ಸುಳಿಯುತ್ತಿಲ್ಲವೇಕೆ’ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಕುಷ್ಟಗಿ ಇಂದಿರಾನಗರ ಶಾಲೆ ಸುತ್ತಲಿನ ಪ್ರದೇಶ ಮದ್ಯ ಮಾಂಸ ತ್ಯಾಜ್ಯದಿಂದ ಮಲೀನಗೊಂಡಿರುವುದು
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ಮಕ್ಕಳ ದಾಖಲಾತಿ ಕೊರತೆ ನೀಗಿಸಲು ಶಾಲಾ ಶಿಕ್ಷಣ ಇಲಾಖೆಯ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ
ದಂಡಪ್ಪ ಹೊಸಮನಿ ಸಿಆರ್‌ಪಿ ಕುಷ್ಟಗಿ
ನಮ್ಮ ಶಾಲೆಯಲ್ಲಿರುವ ಅನುಕೂಲ ಶೈಕ್ಷಣಿಕ ವಾತಾವರಣ ಕುರಿತು ಪಾಲಕರಿಗೆ ಮನವರಿಕೆ ಮಾಡಿಕೊಡಲು ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ
ರಾಜೇಸಾಬ್ ನದಾಫ್‌ ಇಂದಿರಾ ನಗರ ಶಾಲೆ ಶಿಕ್ಷಕ
ಶಿಕ್ಷಣವೇ ಇಲ್ಲವೆಂದ ಮೇಲೆ ಊಟ ಬಟ್ಟೆ ಕೊಟ್ಟರೇನು ಪ್ರಯೋಜನ? ಅನೇಕ ಶಿಕ್ಷಕರು ಬರೀ ನೌಕರಿ ಮಾಡಲು ಬರುತ್ತಾರೆ. ಮಕ್ಕಳಿಗೆ ಕನ್ನಡವೂ ಬರೆಯಲು ಬರಲ್ಲ ಎಂದರೆ ಸರ್ಕಾರಿ ಶಾಲೆಗಳ ಗುಣಮಟ್ಟ ಅರ್ಥವಾಗುತ್ತೆ
ಹನುಮಗೌಡ ಪಾಟೀಲ ಸ್ಥಳೀಯ ನಿವಾಸಿ

ಶಾಲೆ ಸುತ್ತ ಮದ್ಯ ಮಾಂಸ ತ್ಯಾಜ್ಯ

ಕುಷ್ಟಗಿ ಪಟ್ಟಣದ ಇಂದಿರಾ ನಗರ ಶಾಲೆಯ ಸುತ್ತಲಿನ ವಾತಾವರಣ ಮಲೀನಗೊಂಡಿದೆ. ಅಲ್ಲಿರುವ ಬಾರ್ ಮಾಂಸಾಹಾರ ಖಾನಾವಳಿಗಳ ಮಾಲೀಕರು ತ್ಯಾಜ್ಯ ತಂದು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ಇದರಿಂದ ಶಾಲೆ ಪಕ್ಕದ ಪ್ರದೇಶ ಮಲೀನಗೊಂಡು ಶಾಲೆಯ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪವಿದೆ. ಮದ್ಯದ ಖಾಲಿ ಪಾಕೆಟ್‌ಗಳು ಮಾಂಸದ ತ್ಯಾಜ್ಯ ಕೊಳೆತ ವಸ್ತುಗಳಿಂದಾಗಿ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಪುರಸಭೆಯ ಕಸ ಸಂಗ್ರಹ ವಾಹನ ಇಲ್ಲಿ ಬರುವುದೇ ಇಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.