ಕುಷ್ಟಗಿ: ಪಟ್ಟಣದ ಹೃದಯಭಾಗದಲ್ಲಿರುವ ಮತ್ತು ಕೃಷಿಯೇತರ ಎಂದು ಭೂ ಪರಿವರ್ತನೆಗೊಳ್ಳದ ಕಂದಾಯ ಜಮೀನಿನಲ್ಲಿ ಅನಧಿಕೃತವಾಗಿ ಬೃಹತ್ ವಾಣಿಜ್ಯ ಸಂಕೀರ್ಣ ತಲೆ ಎತ್ತಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ.
ಬಸ್ ನಿಲ್ದಾಣವನ್ನೂ ಒಳಗೊಂಡಂತೆ ಸರ್ವೆ ಸಂಖ್ಯೆ 51/2ರಲ್ಲಿ ಸಿದ್ದಮ್ಮ ಫಕೀರಪ್ಪ ಪಟ್ಟಣಶೆಟ್ಟಿ ಹೆಸರಿನಲ್ಲಿ 13 ಗುಂಟೆ ಹಾಗೂ ರಾಜೇಶ್ವರಿ ಸಿದ್ದಣ್ಣ ಪಟ್ಟಣಶೆಟ್ಟಿ ಎಂಬುವವರ ಅವರ ಹೆಸರಲ್ಲಿ 14 ಗುಂಟೆ ಜಮೀನು ಇದೆ. ಆದರೆ ಇದರಲ್ಲಿಯೇ ಸಾಯಿ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದೆ. ಬ್ಯಾಂಕ್‌ಗಳು, ಬಾರ್ ಮತ್ತು ರೆಸ್ಟಾರೆಂಟ್, ಹೋಟೆಲ್, ಸೇರಿದಂತೆ ಸುಮಾರು 25ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳು ಇದರಲ್ಲಿವೆ. ಆದರೆ ಸರ್ಕಾರದ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದಕ್ಕೆ ಅಚ್ಚರಿ ವ್ಯಕ್ತವಾಗಿದೆ.
ಯಾವುದೇ ಉದ್ದೇಶಕ್ಕೆ ಜಮೀನು ಅಗತ್ಯವಾಗಿದ್ದರೆ ಅದನ್ನು ಕಡ್ಡಾಯವಾಗಿ ಅದೇ ಉದ್ದೇಶಕ್ಕೆ ಭೂ ಪರಿವರ್ತನೆಗೊಳಿಸಬೇಕು. ನಂತರ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸ ಅನುಮೋದನೆಗೊಂಡಿರಬೇಕು. ಮತ್ತು ಕಟ್ಟಡದ ನಕ್ಷೆಗೆ ಮಂಜೂರಾತಿ ಪಡೆದಿರಬೇಕು. ಅಷ್ಟೇ ಅಲ್ಲದೆ ಕಟ್ಟಡದ ನಿರ್ಮಾಣಕ್ಕೆ ಮೊದಲು ಸ್ಥಳೀಯ ಸಂಸ್ಥೆಯಿಂದ ಪರವಾನಗಿ ಪಡೆಯುವುದು ನಿಯಮ. ಆದರೆ ಈ ಯಾವ ನಿಯಮಗಳನ್ನೂ ಅನುಸರಿಸದೆ ದಶಕದ ಹಿಂದೆಯೇ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು ಈ ಪ್ರದೇಶ ಈಗಲೂ ಪಹಣಿಗಳಲ್ಲಿ ಕಂದಾಯ ಜಮೀನು ಎಂದಿದೆ. ಹಾಗಾಗಿ ಅನಧಿಕೃ ವಾಣಿಜ್ಯ ಸಂಕೀರ್ಣದ ತೆರವಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದಾಖಲೆಗಳ ಸಹಿತ ಪರಶುರಾಮ ನಾಗರಾಳ ಎಂಬುವವರು ದೂರು ಸಲ್ಲಿಸಿದ್ದಾರೆ.
ಅಧಿಕೃತವಾಗಿಯೇ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಲಭ್ಯ ಇವೆ. ಆದರೂ ಕೆಲವರು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದು ದೂರು ಸುಳ್ಳಿನಿಂದ ಕೂಡಿದೆಸಿದ್ದಣ್ಣ ಪಟ್ಟಣಶೆಟ್ಟಿ ಭೂ ಮಾಲೀಕ
ವಾಣಿಜ್ಯ ಸಂಕೀರ್ಣದ ಆಸ್ತಿ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆವಿ.ಐ.ಬೀಳಗಿ ಪುರಸಭೆ ಮುಖ್ಯಾಧಿಕಾರಿ
ಭೂ ಪರಿವರ್ತನೆಯಾಗದಿದ್ದರೂ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು ಅದರ ತೆರವಿಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕಿದೆಪರಶುರಾಮ ನಾಗರಾಳ ದೂರುದಾರ
ಕಚೇರಿಯಲ್ಲಿಲ್ಲದ ದಾಖಲೆ ಮಾಲೀಕರ ಬಳಿ!:
ಈ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪುರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರದ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ ನಗರ ಯೋಜನಾ ಇಲಾಖೆ ಸರ್ವೆ ಸಂಖ್ಯೆ 51/2ರಲ್ಲಿನ ಜಮೀನಿಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಿಂದ ಯಾವುದೇ ವಿನ್ಯಾಸ ಅನುಮೋದನೆಗೊಂಡಿಲ್ಲ ಎಂದು ಸಹಾಯಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಪುರಸಭೆ ನೀಡಿರುವ ಮಾಹಿತಿ ಪ್ರಕಾರ ಸಾಯಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸಂಬಂಧಿಸಿದ ಆಸ್ತಿ ಕಡತ ಪರಿಶೀಲಿಸಲಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿಲ್ಲ ಅಲ್ಲದೆ ಸದರಿ ಜಮೀನು ಭೂ ಪರಿವರ್ತನೆಯೇ ಆಗಿಲ್ಲ ಎಂದು ವಿವರಿಸಿದೆ. ಆದರೆ ಭೂ ಮಾಲೀಕರ ಬಳಿ ಮಾತ್ರ ಪುರಸಭೆ ಮುಖ್ಯಾಧಿಕಾರಿ 2012ರ ಜುಲೈ 31 ರಂದು ಕಟ್ಟಡ ಪರವಾನಗಿ ನೀಡಿರುವ ದಾಖಲೆ ಇರುವುದು ಅಚ್ಚರಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.