ADVERTISEMENT

ನೀರಿನ ಸಮಸ್ಯೆ, ಮದ್ಯ ಅಕ್ರಮ ಮಾರಾಟ: ಕುಷ್ಟಗಿ ಜನಸ್ಪಂದನದಲ್ಲಿ ದೊರಕೀತೆ ಪರಿಹಾರ

ನಾರಾಯಣರಾವ ಕುಲಕರ್ಣಿ
Published 19 ಜನವರಿ 2026, 6:16 IST
Last Updated 19 ಜನವರಿ 2026, 6:16 IST
   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಜನರ ಕುಂದುಕೊರತೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಜ.19 ರಂದು ತಾಲ್ಲೂಕು ಮಟ್ಟದ ಜನಸ್ಪಂದನ ಸಭೆ ನಡೆಯಲಿದೆ.

ಶಾಸಕ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ತಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯಬಹುದೇ ಎಂಬುದು ಇಲ್ಲಿಯ ಜನರ ನಿರೀಕ್ಷೆಯಾಗಿದೆ.

ತಾಲ್ಲೂಕಿನ ಬಹುತೇಕ ಹಳ್ಳಿಗಳ ನೀರಿನ ಸಮಸ್ಯೆ ಪ್ರಮುಖವಾಗಿದೆ. ಜನರಿಗೆ ಶುದ್ಧ ನೀರು ಪೂರೈಸಲು ಮನೆಮನೆಗೆ ಗಂಗೆ ಎಂಬ ಪರಿಕಲ್ಪನೆಯಲ್ಲಿ ಅನುಷ್ಠಾನಗೊಂಡಿರುವ ಜಲ ಜೀವನ್ ಮಿಷನ್ ಕಾಗದಲ್ಲಿ ಮಾತ್ರ ಎನ್ನುವಂತಾಗಿದೆ. ಬಹುತೇಕ ಹಳ್ಳಿಗಳಿಗೆ ನೀರು ಬರುವುದೇ ಅಪರೂಪ. ವಾರಗಟ್ಟಲೇ ನೀರು ಬಾರದ ಹಳ್ಳಿಗಳೂ ಇವೆ. ಅಧಿಕಾರಿಗಳು ಏನಾದರೂ ಒಂದು ನೆಪ ಹೇಳುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಜನ ತೊಂದರೆ ಅನುಭವಿಸುವಂತಾಗುತ್ತದೆ ಎಂಬ ಆತಂಕ ಇದ್ದು ಜೆಜೆಎಂ ಸಮಸ್ಯೆ ಬಗ್ಗೆ ಅಧಿಕಾರಿಗಳ ಉತ್ತರ ಏನು ಎಂಬುದು ಜನರ ಪ್ರಶ್ನೆಯಾಗಿದೆ.

ADVERTISEMENT

ಡಾಬಾಗಳು, ಹೋಟೆಲ್‌, ಕಿರಾಣಿ ಅಂಗಡಿ, ಪಾನ್‌ಬೀಡಾ ಅಂಗಡಿ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಮದ್ಯದ ಅಕ್ರಮ ಮಾರಾಟದ ಅಂಗಡಿಗಳಿದ್ದು ನೀರಿಗಿಂತ ಬಿಯರ್‌ ಮಾರಾಟ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವಾಗಿದೆ ಎನ್ನುತ್ತಾರೆ ಹೆಸರು ಪ್ರಕಟಿಸಲು ಇಚ್ಛಿಸದ ಗ್ರಾಮಸ್ಥರು. ಇದು ಒಂದು ಊರಿನ ಸಮಸ್ಯೆಯಂತೂ ಅಲ್ಲ ಎನ್ನಲಾಗಿದೆ.

ಪಡಿತರ ದೂರ: ಪಡಿತರ ವ್ಯವಸ್ಥೆಯಲ್ಲಿಯೂ ಬಹುತೇಕ ಲೋಪದೋಷಗಳಿದ್ದು ಬಡ ಜನರನ್ನು ಹೈರಾಣಾಗಿಸಿದೆ. ಅರ್ಹರಿದ್ದರೂ ಬಹಳಷ್ಟು ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿವೆ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಧಾನ್ಯ ಸಿಗುತ್ತಿಲ್ಲ. ಕಾರ್ಡ್ ಮತ್ತೆ ಪಡೆಯುವುದಕ್ಕೆ ಆಹಾರ ಇಲಾಖೆ ಕಚೇರಿಗೆ ಹೋದರೆ ಹಣ ಕೊಡಬೇಕು. ಕೊಡದವರನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಹಿರೇಮನ್ನಾಪುರದ ಬಸನಗೌಡ ಪಾಟೀಲ ಇತರರು.

ತುಂಬದ ಕೆರೆಗಳು: ಕೆಬಿಜೆಎನ್‌ಎಲ್‌ ವ್ಯಾಪ್ತಿಯಲ್ಲಿರುವ ಅನೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲ್ತಿಯಲ್ಲಿದೆ. ಬಂದರೆ ಕೆರೆಗಳು ತುಂಬಿ ಹರಿಯುತ್ತವೆ, ಬಾರದಿದ್ದರೆ ಹನಿ ನೀರೂ ಬರುವುದಿಲ್ಲ. ಬೇಸಿಗೆ ಒಳಗಾಗಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಮುತುವರ್ಜಿವಹಿಸಬೇಕು. ಅಲ್ಲದೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಇನ್ನೂ ಎಷ್ಟು ವರ್ಷಗಳವರೆಗೆ ಜನ ಕಾಯಬೇಕು ಎನ್ನುತ್ತಾರೆ ಕಡೆಕೊಪ್ಪ ಗ್ರಾಮದ ರೈತ ಹನುಮಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.