
ಕುಷ್ಟಗಿ: ಸಾರಿಗೆ ಬಸ್ ಸೌಲಭ್ಯದ ಅವ್ಯವಸ್ಥೆಯಿಂದಾಗಿ ತಾಲ್ಲೂಕಿನ ನೀರಲೂಟಿ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಕಾಲ್ನಡಿಗೆಯಲ್ಲಿಯೇ ತೆರಳುವ ಅನಿವಾರ್ಯತೆ ಎದುರಾಗಿದೆ.
ಬಹಳಷ್ಟು ವಿದ್ಯಾರ್ಥಿಗಳು ನೀರಲೂಟಿಯಿಂದ ಹಿರೇಮನ್ನಾಪುರದಲ್ಲಿರುವ ಪ್ರೌಢಶಾಲೆಗೆ ಹಾಗೂ ಕುಷ್ಟಗಿ ಪಟ್ಟಣದ ಕಾಲೇಜುಗಳಿಗೆ ನಿತ್ಯ ಬರಹೋಗುತ್ತಿದ್ದಾರೆ. ಬೆಳಿಗ್ಗೆ ಒಂದು ಬಸ್ ಮಾತ್ರ ಬರುತ್ತಿದ್ದು ಹಿಂದಿನ ಗ್ರಾಮಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಬಸ್ ಭರ್ತಿಯಾಗಿರುತ್ತದೆ. ಹುಲಿಯಾಪುರ, ನೀರಲೂಟಿಗೆ ಬರುಷ್ಟರಲ್ಲಿ ಕಾಲಿಡುವುದಕ್ಕೂ ಬಸ್‌ದಲ್ಲಿ ಜಾಗ ಇರುವುದಿಲ್ಲ. ಬಹುತೇಕ ವಿದ್ಯಾರ್ಥಿಗಳು ಅನಿವಾರ್ಯವಾಗಿ ಅಪಾಯ ಲೆಕ್ಕಿಸದೆ ಬಾಗಿಲಲ್ಲಿ ಜೋತುಬಿದ್ದು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಆದರೂ ಬಸ್‌ದಲ್ಲಿ ಹೋಗಲು ಸಾಧ್ಯವಾಗದ ಕಾರಣ ಬಾಲಕ ಬಾಲಕಿಯರು ಹಿರೇಮನ್ನಾಪುರದ ವರೆಗೆ ನಡೆದುಕೊಂಡೇ ಬರ ಹೋಗುವಂತಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮತ್ತು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಲ ತಿಂಗಳ ಹಿಂದೆ ಕುಷ್ಟಗಿ ಸಾರಿಗೆ ಘಟಕದ ಬಳಿ ಪ್ರತಿಭಟನೆ ನಡೆಸಲಾಗಿತ್ತು. ವಾರದೊಳಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದಾಗಿ ಘಟಕ ವ್ಯವಸ್ಥಾಪಕರು ತಿಳಿಸಿದ್ದರು. ಆದರೆ ಈವರೆಗೂ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ರಮೇಶ ಅಗಸಿಮುಂದಿನ ಇತರರು ದೂರಿದರು.
ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಬಸ್‌ದಲ್ಲಿ ಪ್ರಯಾಣಿಸುತ್ತಿದ್ದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಈ ವಿಷಯದಲ್ಲಿ ಶೀಘ್ರ ಕ್ರಮ ಜರುಗಿಸದಿದ್ದರೆ ಸಾರಿಗೆ ಘಟಕಕ್ಕೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.