ADVERTISEMENT

ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಉದ್ಯಾನ ಜಾಗ ನಾಪತ್ತೆ, ಸರ್ಕಾರಿ ಆಸ್ತಿ ರಕ್ಷಣೆಗೆ ಮುಂದಾಗದ ಪುರಸಭೆ ನಿರ್ಲಕ್ಷ್ಯ

ನಾರಾಯಣರಾವ ಕುಲಕರ್ಣಿ
Published 5 ಜನವರಿ 2026, 4:25 IST
Last Updated 5 ಜನವರಿ 2026, 4:25 IST
ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆ ಸೋಮನಗೌಡರ ಬಡಾವಣೆಯ ಪೂರ್ವ ಭಾಗದಲ್ಲಿ ಉದ್ಯಾನಕ್ಕೆ ಜಾಗ ಮೀಸಲಿರಿಸಿರುವುದನ್ನು ನಗರ ಯೋಜನಾ ಇಲಾಖೆ ನಕ್ಷೆಯಲ್ಲಿ ಗುರುತಿಸಿರುವುದು
ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆ ಸೋಮನಗೌಡರ ಬಡಾವಣೆಯ ಪೂರ್ವ ಭಾಗದಲ್ಲಿ ಉದ್ಯಾನಕ್ಕೆ ಜಾಗ ಮೀಸಲಿರಿಸಿರುವುದನ್ನು ನಗರ ಯೋಜನಾ ಇಲಾಖೆ ನಕ್ಷೆಯಲ್ಲಿ ಗುರುತಿಸಿರುವುದು   

ಕುಷ್ಟಗಿ: ನಗರ ಯೋಜನಾ ಇಲಾಖೆ ಗುರುತಿಸಿರುವ ಮೂಲ ನಕ್ಷೆಯ ಪ್ರಕಾರ ಪಟ್ಟಣದಿಂದ ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿರುವ ಸೋಮನಗೌಡ ಪಾಟೀಲ ಎಂಬುವವರ ಬಡಾವಣೆಯಲ್ಲಿ ಉದ್ಯಾನ, ನಾಗರಿಕ ಬಳಕೆಗೆ ಮೀಸಲಿಟ್ಟ ಜಾಗ ಇರಬೇಕಿತ್ತು. ಆದರೆ ಬಡಾವಣೆ ಅಭಿವೃದ್ಧಿಗೊಂಡರೂ ಉದ್ಯಾನ ಜಾಗ ಮಾತ್ರ ನಾಪತ್ತೆಯಾಗಿದೆ.

ಪಟ್ಟಣದಲ್ಲಿ ಬಹಳಷ್ಟು ಬಡಾವಣೆಗಳು ಇದ್ದರೂ ಬಹುತೇಕ ಕಡೆ ಉದ್ಯಾನ, ನಾಗರಿಕ ಬಳಕೆ ಪ್ರದೇಶಗಳು ನಾಪತ್ತೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿವೆ. ಸುಂದರ ಉದ್ಯಾನ ಅಭಿವೃದ್ಧಿಪಡಿಸುವುದು ದೂರದ ಮಾತು ಕನಿಷ್ಟ ಉದ್ಯಾನ ಜಾಗದ ಒತ್ತುವರಿ ತೆರವುಗೊಳಿಸುವುದು, ತಂತಿ ಬೇಲಿ ಅಳವಡಿಸಿ ರಕ್ಷಿಸುವ ನಿಟ್ಟಿನಲ್ಲಿಯೂ ಇಲ್ಲಿಯ ಪುರಸಭೆ ನಿರ್ಲಕ್ಷ್ಯವಹಿಸಿರುವ ಬಗ್ಗೆ ನಾಗರಿಕರು ದೂರುತ್ತಿದ್ದಾರೆ.

ನಗರ ಯೋಜನಾ ಇಲಾಖೆ ಅನುಮೋದಿಸಿರುವ ಇಲ್ಲಿಯ ಸೋಮನಗೌಡ ಪಾಟೀಲ ಎಂಬುವವರಿಗೆ ಸೇರಿದ ಸರ್ವೆ ಸಂಖ್ಯೆ 103/ಡಿ ವಸತಿ ವಿನ್ಯಾಸದ ಬಡಾವಣೆ ಮಧ್ಯದಲ್ಲಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ಅದಕ್ಕೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿ ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಸೇರಿದ ಸರ್ಕಾರಿ ಜಾಗವೂ ಇತ್ತು. ಆದರೆ ಸದ್ಯ ಅಲ್ಲಿ ಖಾಲಿ ಜಾಗವೇ ಇಲ್ಲದೆ ವಿವಿಧ ಕಟ್ಟಡಗಳು ನಿರ್ಮಾಣಗೊಂಡಿವೆ. ತನ್ನದೇ ಆಸ್ತಿಯಾಗಿದ್ದರೂ ಪುರಸಭೆ ಉದ್ಯಾನ ಜಾಗ ಗುರುತಿಸಲು ಮುಂದಾಗಿಲ್ಲ. ಸಾರ್ವಜನಿಕರು ದೂರು ನೀಡಿದರೂ ನಿರ್ಲಕ್ಷ್ಯ ಮುಂದುವರಿದಿದ್ದು ಪ್ರಭಾವಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸರ್ಕಾರದ ಜಾಗ ಲಪಟಾಯಿಸಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಜನರು ಆರೋಪಿಸಿದ್ದಾರೆ.

ADVERTISEMENT
ಉದ್ಯಾನ ಜಾಗ ಒತ್ತುವರಿಯಾಗಿ ಕಟ್ಟಡಗಳು ನಿರ್ಮಾಣಗೊಂಡಿರುವುದು
ಅಮರೇಶ್ವರ ಶೆಟ್ಟರ ಬಡಾವಣೆ ಉದ್ಯಾನ ಜಾಗಕ್ಕೆ ತಂತಿ ಬೇಲಿ ಅಳವಡಿಸುತ್ತೇವೆ. ಅದರಲ್ಲಿ ಯಾವುದೇ ರಸ್ತೆಗೆ ಜಾಗ ನೀಡುವ ಪ್ರಶ್ನೆಯೇ ಇಲ್ಲ. ಶೆಡ್‌ಗಳನ್ನೂ ತೆರವುಗೊಳಿಸುತ್ತೇವೆ
ವಿ.ಐ.ಬೀಳಗಿ ಪುರಸಭೆ ಮುಖ್ಯಾಧಿಕಾರಿ
ಮಾರುಕಟ್ಟೆ ಮೌಲ್ಯದ ಪ್ರಕಾರ ಮುಖ್ಯರಸ್ತೆ ಪಕ್ಕದ ಉದ್ಯಾನ ಜಾಗಗಳು ಕೋಟ್ಯಂತರ ಬೆಲೆ ಬಾಳುತ್ತಿವೆ. ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಪುರಸಭೆಗೆ ತಾಕೀತು ಮಾಡಬೇಕಿದೆ.
ವಜೀರ ಅಲಿ ಗೋನಾಳ ಭಗತ್‌ಸಿಂಗ್‌ ಸಂಸ್ಥೆ ಅಧ್ಯಕ್ಷ

ತಂತಿ ಬೇಲಿ ಅಳವಡಿಕೆಗೆ ಒತ್ತಾಯ

ಮೂಲ ನಕ್ಷೆಯ ಪ್ರಕಾರ ಮೀಸಲಿರಿಸಿರುವ ಸೋಮನಗೌಡ ಪಾಟೀಲ ಬಡಾವಣೆಯಲ್ಲಿರುವ ಉದ್ಯಾನ ಮತ್ತು ನಾಗರಿಕ ಬಳಕೆಗೆ ಸೇರಿದ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸಿ ಅದಕ್ಕೆ ತಂತಿ ಬೇಲಿ ಅಳವಡಿಸುವ ಮೂಲಕ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಪಟ್ಟಣದ ಭಗತ್‌ಸಿಂಗ್‌ ಸಂಸ್ಥೆ ಅಧ್ಯಕ್ಷ ವಜೀರ ಅಲಿ ಗೋನಾಳ ಒತ್ತಾಯಿಸಿದ್ದಾರೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿರುವ ಅವರು ಸರ್ಕಾರದ ಜಾಗವನ್ನು ಕೆಲ ಪ್ರಭಾವಿ ವ್ಯಕ್ತಿಗಳು ಅತಿಕ್ರಮಿಸಿದ್ದು ಮುಲಾಜಿಲ್ಲದೆ ತೆರವುಗೊಳಿಸಬೇಕಿತ್ತು. ಮತ್ತು ಉದ್ಯಾನ ಅಭಿವೃದ್ಧಿಪಡಿಸುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಿ ಮಕ್ಕಳು ಸಾರ್ವಜನಿಕರ ವಿಹಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ಅವಕಾಶವಿದ್ದರೂ ನಿರ್ಲಕ್ಷ್ಯವಹಿಸಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.