ADVERTISEMENT

ಕುಷ್ಟಗಿ -ಬೆಂಗಳೂರು ರೈಲು; ಶೀಘ್ರ ಕ್ರಮ: ಸಚಿವ ವಿ.ಸೋಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:19 IST
Last Updated 31 ಅಕ್ಟೋಬರ್ 2025, 7:19 IST
ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಬೇಡಿಕೆ ಕುರಿತ ಮನವಿಯನ್ನು ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಬೆಂಗಳೂರಿನಲ್ಲಿ ಗುರುವಾರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಿದರು
ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಬೇಡಿಕೆ ಕುರಿತ ಮನವಿಯನ್ನು ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಬೆಂಗಳೂರಿನಲ್ಲಿ ಗುರುವಾರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಿದರು    

ಕುಷ್ಟಗಿ: ಇಲ್ಲಿಯ ರೈಲು ನಿಲ್ದಾಣದಿಂದ ಬೆಂಗಳೂರುವರೆಗೆ ರೈಲು ಸೇವೆ ಒದಗಿಸುವ ನಿಟ್ಟಿನಲ್ಲಿ ಎರಡು ತಿಂಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿ ರೈಲು ಸಂಪರ್ಕ ಸೇವೆಗೆ ಸಂಬಂಧಿಸಿದಂತೆ ರೈಲ್ವೆ ಹೋರಾಟ ಸಮಿತಿ ನಿಯೋಗ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ನೂತನ ರೈಲ್ವೆ ಮಾರ್ಗದಲ್ಲಿ ಉತ್ತಮ ಸಂಪರ್ಕ ಸೇವೆಗೆ ಹೊಸರೂಪ ನೀಡಿ ಜನರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ನಿಯೋಗದ ನೇತೃತ್ವ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು, ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸುವುದು ಹೆಚ್ಚು ಅಗತ್ಯವಾಗಿದೆ. ಕುಷ್ಟಗಿ - ಕೊಪ್ಪಳ ಮಾರ್ಗವಾಗಿ ಅಥವಾ ಕುಷ್ಟಗಿ - ಹುಬ್ಬಳ್ಳಿ ಮಾರ್ಗವಾಗಿಯಾದರೂ ರೈಲು ಸೇವೆ ಆರಂಭಿಸಬೇಕು. ಆರಂಭಿಕ ಹಂತದಲ್ಲಿ ಹಂಪಿ ಎಕ್ಸ್‌ಪ್ರೆಸ್‌ ರೈಲಿಗೆ ಬೋಗಿ ಸಂಪರ್ಕ ಕಲ್ಪಿಸುವುದಕ್ಕಾದರೂ ಕ್ರಮ ಕೈಗೊಳ್ಳುವಂತೆ ಸೋಮಣ್ಣ ಅವರಿಗೆ ಮನವಿ ಮಾಡಿದರು.

ADVERTISEMENT

‘ರೈಲು ಸಂಚಾರ ಸೇವೆಯಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿಸುವುದು ಮತ್ತು ಸಮಯದ ಉಳಿತಾಯವಾಗುತ್ತದೆ. ಅದಕ್ಕಾಗಿ ಈ ವಿಷಯದಲ್ಲಿ ಹೊಸತನ ತರುವ ಚಿಂತನೆ ಇದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಹಲವಾರು ಮಾರ್ಗಗಳಲ್ಲಿ ರೈಲು ಸೇವೆ ಕಲ್ಪಿಸುವಲ್ಲಿ ಇಲಾಖೆ ಇತಿಹಾಸ ನಿರ್ಮಿಸಲಿದೆ. ಅದೇ ರೀತಿ ಗದಗ-ವಾಡಿವರೆಗಿನ ಮಾರ್ಗವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಬದ್ಧತೆ ತೋರಲಾಗುತ್ತದೆ' ಎಂದು ಸಚಿವ ಸೋಮಣ್ಣ ಹೇಳಿದ್ದಾಗಿ ನಿಯೋಗದ ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಕೆ.ಬಸವರಾಜ, ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಸೇರಿದಂತೆ ಸಮಿತಿ ಪ್ರತಿನಿಧಿಗಳು ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.