ADVERTISEMENT

ನೀರು ಪೂರೈಕೆ ಯೋಜನೆಗೆ ಹಿನ್ನಡೆ; ಅಮರೇಗೌಡ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 4:24 IST
Last Updated 14 ಜೂನ್ 2022, 4:24 IST
ಕುಷ್ಟಗಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಇದ್ದರು
ಕುಷ್ಟಗಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಇದ್ದರು   

ಕುಷ್ಟಗಿ: ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ಕಾಲಾವಕಾಶ ನೀಡಿದ್ದರೂಯೋಜನೆ ಪೂರ್ಣಗೊಳಿಸುವಲ್ಲಿಎಲ್‌ ಅಂಡ್‌ ಟಿ ಕಂಪನಿಯ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶಿಫಾರಸು ಮಾಡುವ ನಿರ್ಣಯಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲು ₹666 ಕೋಟಿ ವೆಚ್ಚದ ಕಾಮಗಾರಿ ಎಲ್‌ ಅಂಡ್‌ ಟಿ ಕಂಪನಿ ಗುತ್ತಿಗೆ ಪಡೆದಿದೆ. 2021ರಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಕೋವಿಡ್‌ ಕಾರಣಕ್ಕೆ 2022ರ ಮಾರ್ಚ್ ಅಂತ್ಯದೊಳಗೆ ಮುಗಿಸಲು ಕಂಪನಿಗೆ ಕಾಲಾವಕಾಶ ನೀಡಲಾಗಿತ್ತು. ಇಷ್ಟಾದರೂ ನಿಗದಿತ ಅವಧಿಯಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಸಭೆಯಲ್ಲಿ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.

ADVERTISEMENT

ಕುಷ್ಟಗಿ ತಾಲ್ಲೂಕಿನ 173 ಹಳ್ಳಿಗಳ ಪೈಕಿ ಕೇವಲ 68 ಗ್ರಾಮಗಳಿಗೆ ಮಾತ್ರ ಜೆಜೆಎಂ ಯೋಜನೆಯಲ್ಲಿ ನೀರು ಪೂರೈಕೆಯಾಗುತ್ತಿದೆ. ಅನೇಕ ಗ್ರಾಮ ಗಳಲ್ಲಿನ ಓವರ್‌ಹೆಡ್‌ ಟ್ಯಾಂಕ್‌ಗಳು ಗ್ರಾಮಗಳಿಂದ ದೂರದಲ್ಲಿವೆ. ಹೆಚ್ಚುವರಿ ಕೊಳವೆಮಾರ್ಗ ಅಳವಡಿಸುವುದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿಸಿ ಅನುದಾನಕ್ಕೆ ಅನುಮೋದನೆ ನೀಡಿದೆ. ಇಷ್ಟಾದರೂ ಪ್ರಗತಿಯಾಗುತ್ತಿಲ್ಲ ಎಂದರು.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಾಮಣ್ಣ ನಾರಿನಾಳ ಮಾತನಾಡಿ, ವಿಳಂಬ ಕಾರಣಕ್ಕೆ ಕಂಪನಿಗೆ ಸರ್ಕಾರ ದಂಡ ವಿಧಿಸಿದೆ. 96 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದರು.

ಬಹುತೇಕ ಗ್ರಾಮ ಗಳಲ್ಲಿಕಾಮಗಾರಿಗಳು ಕಳಪೆಯಾಗಿವೆ. ಪಂಚಾಯಿತಿ ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆ ಇದೆ. ಅನೇಕ ಕಡೆ ಕಾಟಾಚಾರದ ಕಾಮಗಾರಿ ನಡೆದಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಎಂಜಿನಿಯರ್ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸಗಳು ವಿಳಂಬವಾಗುತ್ತಿವೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವುದಾಗಿ ಶಾಸಕ ಅಮರೇಗೌಡ ಸಭೆಗೆ ತಿಳಿಸಿದರು.

ತಾ.ಪಂ. ಇಒ ಶಿವಪ್ಪ ಸುಬೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.