ADVERTISEMENT

ಕುಷ್ಟಗಿ | ‘ಸವಾಲು ಎದುರಿಸಲು ಸಂಘಟನಾ ಶಕ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:25 IST
Last Updated 9 ಅಕ್ಟೋಬರ್ 2024, 5:25 IST
ಕುಷ್ಟಗಿಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯತ್ವ ಅಭಿಯಾನದಲ್ಲಿ ಮುಖಂಡ ಸಂದೀಪ್‌ ರವಿ ಮಾತನಾಡಿದರು
ಕುಷ್ಟಗಿಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯತ್ವ ಅಭಿಯಾನದಲ್ಲಿ ಮುಖಂಡ ಸಂದೀಪ್‌ ರವಿ ಮಾತನಾಡಿದರು   

ಕುಷ್ಟಗಿ: ‘ಬಿಜೆಪಿ ಬಲಿಷ್ಠ ನಾಯಕತ್ವ ಹೊಂದಿದ್ದರೂ ಪಕ್ಷದ ಮುಂದಿರುವ ಅನೇಕ ಸವಾಲುಗಳನ್ನು ಎದುರಿಸಬೇಕಾದರೆ ಸಂಘಟನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ’ ಎಂದು ಪಕ್ಷದ ರಾಜ್ಯ ಯುವ ಮೋರ್ಚಾದ ಪ್ರಧಾನಕಾರ್ಯದರ್ಶಿ ಸಂದೀಪ್ ರವಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಯುವಮೋರ್ಚಾ ಏರ್ಪಡಿಸಿದ್ದ ಜಿಲ್ಲಾ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ‘ಮೊದಲಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿರುವ ದೇಶದ ಯುವ ಸಮೂಹವನ್ನು ಗುರುತಿಸಿ ಪಕ್ಷದ ಸದಸ್ಯರನ್ನಾಗಿಸುವ ಬಹುದೊಡ್ಡ ಜವಾಬ್ದಾರಿಯನ್ನು ಯುವ ಮೋರ್ಚಾ ನಿಭಾಯಿಸುತ್ತಿದ್ದು ಈ ವಿಷಯದಲ್ಲಿ ಮುಖಂಡರು ಶ್ರಮಹಿಸಬೇಕು’ ಎಂದರು.

‘ಬದಲಾಗುತ್ತಿರುವ ಭಾರತದ ಪರಿಸ್ಥಿತಿಯ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸಬೇಕಿದ್ದು ಪಕ್ಷದಲ್ಲಿ ಭವಿಷ್ಯದ ನಾಯಕರಾಗಿರುವ ಪಕ್ಷದ ಯುವಕರು ಸದಸ್ಯತ್ವ ಅಭಿಯಾನದಲ್ಲಿ ಮುತುವರ್ಜಿವಹಿಸಬೇಕು. ಅಲ್ಲದೆ ದೇಶಕ್ಕೆ ಬಿಜೆಪಿ ಏಕೆ ಅನಿವಾರ್ಯ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅದೇ ರೀತಿ ರಾಜ್ಯ ಕಾಂಗ್ರೆಸ್‌ ಪಕ್ಷದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ನಡೆಸಬೇಕು’ ಎಂದರು.

ADVERTISEMENT

ಮುಖಂಡ ಅಡವಿಸ್ವಾಮಿ ಮಾತನಾಡಿ, ಯಾವ ಭೇದವಿಲ್ಲದೆ ಎಲ್ಲ ಜನರನ್ನೂ ಪಕ್ಷದ ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ. ಜನಸಂದಣಿ ಇರುವ ಸ್ಥಳಗಳಲ್ಲೇ ಅಭಿಯಾನ ನಡೆಸಬೇಕು ಎಂದು ಹೇಳಿದರು.

ಪ್ರಮುಖರಾದ ಕೆ.ಮಹೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಹಾಂತೇಶ ಬದಾಮಿ, ಶಾಮಜಿ ಇತರರು ಮಾತನಾಡಿದರು. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮೌನೇಶ ಧಡೇಸೂಗುರು ಅಧ್ಯಕ್ಷತೆ ವಹಿಸಿದ್ದರು. ಶಿವನಗೌಡ, ನಬಿಸಾಬ ಕುಷ್ಟಗಿ, ಪರಿಮಳಾ ಶೆಟ್ಟರ, ಶೈಲಜಾ ಬಾಗಲಿ ಇತರರು ಇದ್ದರು. ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.