ADVERTISEMENT

ಕುಷ್ಟಗಿ: ಸದಸ್ಯರ ಮಧ್ಯೆಯೇ ವಾಗ್ವಾದ, ಕಾವೇರಿದ ಚರ್ಚೆ

ಪುರಸಭೆಯಲ್ಲಿ ಶುಕ್ರವಾರ ಮಹಾಂತೇಶ ಕಲಭಾವಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:20 IST
Last Updated 9 ಆಗಸ್ಟ್ 2025, 6:20 IST
ಕುಷ್ಟಗಿ ಪುರಸಭೆಯಲ್ಲಿ ಶುಕ್ರವಾರ ಮಹಾಂತೇಶ ಕಲಭಾವಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು
ಕುಷ್ಟಗಿ ಪುರಸಭೆಯಲ್ಲಿ ಶುಕ್ರವಾರ ಮಹಾಂತೇಶ ಕಲಭಾವಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು   

ಕುಷ್ಟಗಿ: ಸಂತೆ ಮೈದಾನದಲ್ಲಿರುವ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ನಡೆಸುವ ಮೂಲಕ ಹಂಚಿಕೆ ಮಾಡಲು ಶುಕ್ರವಾರ ನಡೆದ ಪುರಸಭೆ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಅನಧಿಕೃತವಾಗಿ ವ್ಯಾಪಾರಿಗಳಿಗೆ ಮಳಿಗೆಗಳನ್ನು ಹಿಂದಿನ ಅವಧಿಯಲ್ಲಿ ಹಂಚಿಕೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತು ಆರಂಭಿಸಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ ಸದಸ್ಯ ಖಾಜಾ ಮೈನುದ್ದೀನ್‌ ಮುಲ್ಲಾ ಇತರರು, ‘ಬೇಕಾಬಿಟ್ಟಿಯಾಗಿ ನಿರ್ಣಯ ತೆಗೆದುಕೊಂಡು ಮಳಿಗೆ ಹಂಚಿಕೆ ಮಾಡಿರುವ ವಿಷಯ ಪತ್ರಿಕೆಯಲ್ಲಿ ಸರಣಿಯಲ್ಲಿ ಪ್ರಕಟವಾಗಿ ಪುರಸಭೆ ಮರ್ಯಾದೆ ಹರಾಜಾಗುತ್ತಿದೆ. ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸಬೇಕು’ ಎಂದರು.

ಆದರೆ ಸಭೆಯ ಕಾರ್ಯಸೂಚಿಯಲ್ಲಿ ಮಳಿಗೆ ವಿಷಯ ಇಲ್ಲ, ಹಾಗಾಗಿ ಅದನ್ನು ಬಿಟ್ಟು ಕಾರ್ಯಸೂಚಿಯಲ್ಲಿರದ ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ ಕೆಲ ಸದಸ್ಯರು ಆಕ್ಷೇಪಿಸಿದರು. ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆಗೆ ಮೈನುದ್ದೀನ್‌ ಮುಲ್ಲಾ ಒತ್ತಾಯಿಸಿದರು. ಅದಕ್ಕೆ ಆಕ್ಷೇಪಿಸಿದ ಸದಸ್ಯ ಗಂಗಾಧರ ಹಿರೆಮಠ, ಅಂಬಣ್ಣ ಬಜಂತ್ರಿ ಇತರರು, ಈಗಾಗಲೇ ಮಳಿಗೆಯಲ್ಲಿರುವವರು ಬಾಡಿಗೆ ಕಟ್ಟುತ್ತ ಬಂದಿದ್ದು ₹50 ಸಾವಿರ ಠೇವಣಿ ಪಡೆದು ಅವರಿಗೇ ವಹಿಸಿಕೊಡಿ, ಪುನಃ ಟೆಂಡರ್‌ ಕರೆಯುವುದು ಬೇಡ ಎಂದೇ ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ‘ನಿಮ್ಮ ಅವಧಿಯಲ್ಲಿಯೇ ಮಳಿಗೆ ಹಂಚಿಕೆಯಾಗಿದ್ದು ಯಾವ ನಿಯಮ, ಆಧಾರದ ಮೇಲೆ ಮಾಡಿದ್ದೀರಿ’ ಎಂದು ಸದಸ್ಯ ಹಿರೇಮಠ ಅವರನ್ನು ಉದ್ದೇಶಿಸಿ ಪ್ರಶ್ನಿಸಿದರು.

ADVERTISEMENT

ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ವಿ.ಐ.ಬೀಳಗಿ, ‘ನಿಯಮಗಳು ಮತ್ತು ಮೇಲಧಿಕಾರಿಗಳ ಮಾರ್ಗದರ್ಶನದ ಪ್ರಕಾರ ಬಹಿರಂಗ ಹರಾಜು ನಡೆಸಿಯೇ ಮಳಿಗೆ ಹಂಚಿಕೆಯಾಗಬೇಕಿದ್ದು ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು’. ಆದರೂ ಈಗ ಇದ್ದವರಿಗೇ ಮಳಿಗೆ ವಹಿಸುವಂತೆ ಕೆಲ ಸದಸ್ಯರು ಪಟ್ಟು ಹಿಡಿದಿದ್ದಕ್ಕೆ ಇತರೆ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು.

ಒತ್ತುವರಿ ತೆರವು: 3ನೇ ವಾರ್ಡಿನ ಕಾಲುವೆ ಒತ್ತುವರಿ ತೆರವುಗೊಳಿಸಿ ನೆನೆಗುದಿಯಲ್ಲಿರುವ ಸಿಸಿ ಚರಂಡಿ ನಿರ್ಮಾಣಕ್ಕೆ ಸದಸ್ಯರು ಒತ್ತಾಯಿಸಿದರು. ಈ ವಿಷಯದಲ್ಲಿರೂ ತೀವ್ರ ವಾಗ್ವಾದ ನಡೆಯಿತು. ನಿಯಮಗಳ ಪ್ರಕಾರ ಕನಿಷ್ಟ 30 ಅಡಿ ಚರಂಡಿಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಸದಸ್ಯ ಮೈನುದ್ದೀನ್‌ ಮುಲ್ಲಾ ಹೇಳಿದರು. ಒತ್ತುವರಿ ಬಗ್ಗೆ ಸ್ಥಾನಿಕ ಪರಿಶೀಲನೆ ನಡೆಸಿ ವರದಿ ನೀಡಲು ಪುರಸಭೆ ಎಂಜಿನಿಯರ್‌ ಶಿಲ್ಪಾ ಅವರಿಗೆ ಸೂಚಿಸಲಾಯಿತು.

ಗ್ರಾಮೀಣ ಬ್ಯಾಂಕ್‌ ಬಳಿಯ ರಸ್ತೆ ಕಾಮಗಾರಿ ನಡೆಯದ ಕಾರಣ ಜನ ತೊಂದರೆ ಅನುಭವಿಸುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಇನ್ನು ಮುಂದೆ ಮುಲಾಜಿಲ್ಲದೆ ಅಕ್ರಮ ಕಟ್ಟೆ, ಮೆಟ್ಟಿಲು ಇತರೆ ಕಟ್ಟಡಗಳನ್ನು ವಾರದ ಒಳಗಾಗಿ ತೆರವುಗೊಳಿಸುವಂತೆ ಅಧ್ಯಕ್ಷ ಮಹಾಂತೇಶ ಕಲಭಾವಿ ತಾಕೀತು ಮಾಡಿದರು.

ಸ್ಥಳೀಯ ಸಂಸ್ಥೆಗಳ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪುರಸಭೆಗಳಿಗೆ ₹7.50 ಕೋಟಿ ಅನುದಾನ ನಿಗದಿಯಾಗಿದೆ, ಶೇ25ರಷ್ಟನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕಿದೆ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬೇಕಿದೆ ಎಂದು ಎಂಜಿನಿಯರ್‌ ಶಿಲ್ಪಾ ಹೇಳಿದರು. ಪುರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಜಾಗ ಸಿಗದಿದ್ದರೆ ಇದ್ದ ಕಟ್ಟಡವನ್ನೇ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಸಲಹೆ ನೀಡಿದರು.

ಅಧ್ಯಕ್ಷ ಮಹಾಂತೇಶ ಕಲಭಾವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ನಾಹೀನಾ ಮುಲ್ಲಾ, ಮುಖ್ಯಾಧಿಕಾರಿ ವಿ.ಐ.ಬೀಳಗಿ, ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.