
ನೀರಾವರಿ
ಕುಷ್ಟಗಿ: ತಾಲ್ಲೂಕಿನ ಅತಿ ದೊಡ್ಡ ಕೆರೆಯಾಗಿರುವ ಬಾದಿಮನಾಳದ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಯ ಮೂರು ಕೆರೆಗಳಿಗೆ ಕೊಪ್ಪಳ ಏತ ನೀರಾವರಿ ಕೊಳವೆಯ ಮೂಲಕ ತಾತ್ಕಾಲಿಕ ಸಂಪರ್ಕದ ಮೂಲಕ ಕೃಷ್ಣಾ ನದಿಯಿಂದ ನೀರು ತುಂಬಿಸುವ ಕೆಲಸಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ಅನುಮತಿಸುವ ಮೂಲಕ ನಿಗಮ ಆ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 15 ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಹಾಗಾಗಿ ಬಾದಿಮನಾಳ, ಜಾಗೀರಗುಡದೂರು ಮತ್ತು ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ಕೆಬಿಜೆಎನ್‌ಎಲ್ ಕೊಳವೆಯ ಮೂಲಕ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ದೊಡ್ಡನಗೌಡ ಪಾಟೀಲ ಬರೆದ ಪತ್ರಕ್ಕೆ ಅನುಗುಣವಾಗಿ ನಾರಾಯಣಪುರದಲ್ಲಿರುವ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ, ತಾತ್ಕಾಲಿಕ ಸಂಪರ್ಕ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ.
ಈಗಾಗಲೇ ಕೆಬಿಜೆಎನ್‌ಎಲ್ ಮೂಲಕ ತಾಲ್ಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದೆ. ಯರಗೇರಾ ಬಳಿ ಈ ಯೋಜನೆಯ ಮುಖ್ಯಕೊಳವೆ ಹಾದುಹೋಗಿದೆ. ಅಲ್ಲಿಂದ ಕೇವಲ ತೀರಾ ಕಡಿಮೆ ಅಂತರದಲ್ಲಿ ಬಾದಿಮನಾಳ, ಮಾವಿನ ಇಟಗಿ ಮತ್ತು ಜಹಗೀರಗುಡದೂರು ಕೆರೆಗಳೂ ಇದ್ದು ಅವುಗಳಿಗೂ ನೀರು ತುಂಬಿಸಲು ಸಾಧ್ಯವಿದೆ ಎಂಬ ಕಾರಣಕ್ಕೆ ಶಾಸಕ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಕುರಿತು ಮಾಹಿತಿ ನೀಡಿದ ಶಾಸಕ ದೊಡ್ಡನಗೌಡ, ಈಗಾಗಲೇ ಸಣ್ಣ ನೀರಾವರಿ ಇಲಾಖೆ ಕೆಲಸ ಆರಂಭಿಸಿದ್ದು ಒಂದೆರಡು ವಾರದ ಒಳಗಾಗಿ ಮೂರೂ ಕೆರೆಗಳಿಗೂ ನೀರು ಹರಿಯಲಿದೆ ಎಂದು ವಿವರಿಸಿದರು.
ಸಂಬಂಧಿಸಿದ ಕೆರೆಗಳಿಗೆ ಶೇ50ರ ಅನುಪಾತದಲ್ಲಿ ನೀರು ತುಂಬಿಸಲು 26.75 ಎಂ.ಸಿ.ಎಫ್.ಟಿ ನೀರಿನ ಅವಶ್ಯಕತೆ ಇದೆ. ಕೃಷ್ಣಾ ನದಿಯಲ್ಲಿ ಮಳೆಗಾಲದ ಅವಧಿಯಲ್ಲಿ ಒಳ ಹರಿವಿನ ಇರುವವರೆಗೆ ‘ಒಂದು ಅವಧಿ’ಯಲ್ಲಿ ಮಾತ್ರ ನೀರು ತುಂಬಿಸಿಕೊಳ್ಳಲು ಅನುಮತಿಸಲಾಗಿದೆ. ಇದಕ್ಕಾಗಿ ಕೆಬಿಜೆಎನ್‌ಎಲ್‌ಗೆ ಸೇರಿದ ಕೊಪ್ಪಳ ಏತ ನೀರಾವರಿ ಮುಖ್ಯಕೊಳವೆಯ ಮೂಲಕ ಸಣ್ಣ ನೀರಾವರಿ ಇಲಾಖೆ ತನ್ನದೇ ಖರ್ಚುವೆಚ್ಚದಲ್ಲಿ ತಾತ್ಕಾಲಿಕ ಸಂಪರ್ಕ ಕಲ್ಪಿಸಿಕೊಂಡು ಒಂದು ಬಾರಿ ಮಾತ್ರ ನೀರು ತುಂಬಿಸಿಕೊಳ್ಳಬೇಕು. ನಂತರ ಸಂಪರ್ಕ ನಿಷ್ಕ್ರೀಯಗೊಳಿಸಿ ಕೊಪ್ಪಳ ಏತ ನೀರಾವರಿ ಕೊಳವೆಯನ್ನು ಯಥಾ ಸ್ಥಿತಿಗೆ ತರುವ ಪೂರ್ಣ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಕೊಳವೆ ಸಂಪರ್ಕ ನಿಷ್ಕ್ರೀಯೆಗೊಳಿಸಿದ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸುವಂತೆ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಪತ್ರದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.