ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಯಲ್ಲಿ ರಂಗೇರಲಿದೆ ‘ಕುಸ್ತಿ’

ಪ್ರಮೋದ
Published 19 ಜನವರಿ 2024, 6:50 IST
Last Updated 19 ಜನವರಿ 2024, 6:50 IST
<div class="paragraphs"><p>ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯ ನೋಟ (ಸಂಗ್ರಹ ಚಿತ್ರ)</p></div>

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯ ನೋಟ (ಸಂಗ್ರಹ ಚಿತ್ರ)

   

ಕೊಪ್ಪಳ: ಆರು ವರ್ಷಗಳ ಬಳಿಕ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆ ಜಿಲ್ಲೆಯಲ್ಲಿ ’ಅಖಾಡ’ವನ್ನು ಬಲಗೊಳಿಸಬಹುದು ಎನ್ನುವ ನಿರೀಕ್ಷೆ ಗರಿಗೆದರಿಸಿದೆ.

ಇತ್ತೀಚೆಗಿನ ಹಲವು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಜಾತ್ರೆ, ಉತ್ಸವದಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಘಟಕರು ಕುಸ್ತಿ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದರು. ಅದನ್ನು ಹೊರತುಪಡಿಸಿದರೆ ನಗರ ಕೇಂದ್ರಗಳಲ್ಲಿ ಪೈಲ್ವಾನರ ಸಾಮರ್ಥ್ಯ ಹೊರಗೆ ಬಂದಿದ್ದು ಬಹಳಷ್ಟು ಕಡಿಮೆ. ಜಿಲ್ಲಾ ಕೇಂದ್ರದಲ್ಲಿರುವ ದುರಸ್ತಿಗೆ ಕಾದಿರುವ ಗರಡಿ ಮನೆಗಳ ಕೊರತೆಯೂ ಇದಕ್ಕೆ ಕಾರಣ.

ADVERTISEMENT

ಆದರೆ ಈಗ ಅಜ್ಜನ ಜಾತ್ರೆಯಲ್ಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜ. 28ರಂದು ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಗವಿಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಹ್ವಾನಿತ ಮಹಿಳಾ ಮತ್ತು ಪುರುಷರ ತಂಡಗಳಿಂದ ಕುಸ್ತಿಗಳು ಜರುಗಲಿವೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಈ ಜಾತ್ರೆಯಲ್ಲಿ 2017ರಲ್ಲಿ ಕೊನೆಯ ಬಾರಿಗೆ ಕುಸ್ತಿ ನಡೆದಿತ್ತು. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಯಾವ ಸ್ಪರ್ಧೆಗಳು ನಡೆದಿರಲಿಲ್ಲ.

ಸ್ಪರ್ಧಾತ್ಮಕ ಯುಗದಲ್ಲಿ ಮ್ಯಾಟ್‌ ಕುಸ್ತಿಯೇ ವಿಜೃಂಭಿಸುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಸಾಂಪ್ರದಾಯಿಕ ಮಣ್ಣಿನ ಕುಸ್ತಿಯ ಸೊಗಡು ಹಾಳಾಗುತ್ತಿದೆ. ಆದ್ದರಿಂದ ಇದನ್ನು ಉಳಿಸಿ ಹಾಗೂ ಬೆಳೆಸಬೇಕು ಎನ್ನುವ ಉದ್ದೇಶದಿಂದಾಗಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಕಾಳಜಿ ವಹಿಸಿ ’ಅಖಾಡ’ ಸಿದ್ಧಗೊಳಿಸಿದ್ದಾರೆ. ಈ ಸ್ಪರ್ಧೆಗಳಲ್ಲಿ ಸ್ಥಳೀಯ 15 ಜನ ಪೈಲ್ವಾನರಿಗೂ ಅವಕಾಶ ಲಭಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಅಂತರರಾಷ್ಟ್ರೀಯ ಕುಸ್ತಿಪಟು ಗದುಗಿನ ಪ್ರೇಮಾ ಹುಚ್ಚಣ್ಣನವರ, ಹಳಿಯಾಳದ ಮನಿಷಾ ಸಿದ್ದಿ, ಮಹಾರಾಷ್ಟ್ರದ ಸುನಿತಾ ಮಗದುಮ್‌, ವೈಷ್ಣವಿ, ಗದಗ, ಬಾಗಲಕೋಟೆ, ಬೆಳಗಾವಿ, ದೆಹಲಿ, ದಾವಣಗೆರೆ ಹೀಗೆ ರಾಜ್ಯ ಮತ್ತು ಹೊರರಾಜ್ಯಗಳ ಕುಸ್ತಿಪಟುಗಳು ಗವಿಸಿದ್ಧೇಶ್ವರಜ್ಜನ ಸನ್ನಿಧಿಯಲ್ಲಿ ತಮ್ಮ ಪಟ್ಟು ಪ್ರದರ್ಶನ ಮಾಡಲಿದ್ದಾರೆ.

ಗದಗ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಂಪಿ ಉತ್ಸವ ಮತ್ತು ಮೈಸೂರು ದಸರಾ ಸಂದರ್ಭದಲ್ಲಿ ಈಗಲೂ ನಡೆಯುವ ಸಾಂಪ್ರದಾಯಿಕ ಸ್ಪರ್ಧೆಗಳು ಕುಸ್ತಿ ಪ್ರಿಯರನ್ನು ಸೆಳೆದಿಡುತ್ತವೆ. ಇಲ್ಲಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಪೈಲ್ವಾನರು ಬರಲಿರುವ ಕಾರಣ ’ಅಖಾಡ’ ರಂಗೇರುತ್ತದೆ ಎನ್ನುವ ನಿರೀಕ್ಷೆ ಜನರದ್ದಾಗಿದೆ.

ಈ ಎಲ್ಲ ಕುಸ್ತಿ ಪಟುಗಳಿಗೆ ಮಠವೇ ವಸತಿ ವ್ಯವಸ್ಥೆ ಊಟ ಮತ್ತು ಇನ್ನಿತರ ಖರ್ಚುಗಳನ್ನು ನೋಡಿಕೊಳ್ಳಲಿದೆ. ಹೀಗಾಗಿ ರಾಜ್ಯ ಮತ್ತು ಬೇರೆ ರಾಜ್ಯಗಳಿಂದ ಹೆಚ್ಚಿನ ಕುಸ್ತಿಪಟುಗಳು ಕೊಪ್ಪಳಕ್ಕೆ ಬರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಂಪ್ರದಾಯಿಕ ಕುಸ್ತಿ ಬೆಳೆಸುವ ಮಹತ್ವದ ಕಾರ್ಯಕ್ಕೆ ಇಲ್ಲಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯೂ ಕೈ ಜೋಡಿಸಿದೆ.

ಜನವರಿ 28 ರಂದು ನಡೆಯಲಿರುವ ಕುಸ್ತಿ ಸ್ಪರ್ಧೆ ಜಿಲ್ಲೆಯ 15 ಪ್ರತಿಭೆಗಳಿಗೆ ಅವಕಾಶ ಸಾಧ್ಯತೆ 2017ರಲ್ಲಿ ಕೊನೆಯ ಬಾರಿಗೆ ಅಜ್ಜನ ಜಾತ್ರೆಯಲ್ಲಿ ನಡೆದಿದ್ದ ಕುಸ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.