ADVERTISEMENT

ಕೆರೆ ಪುನಶ್ಚೇತನಕ್ಕೆ ಸಾರ್ವಜನಿಕರ ಸಹಭಾಗಿತ್ವ

ಇದ್ದರೂ ಇಲ್ಲದಂತಿರುವ ಸಣ್ಣ ನೀರಾವರಿ ಇಲಾಖೆ: ದೂರದ ವಿಜಯಪುರದಲ್ಲಿ ವಿಭಾಗೀಯ ಕಚೇರಿ

ಸಿದ್ದನಗೌಡ ಪಾಟೀಲ
Published 12 ಏಪ್ರಿಲ್ 2021, 5:34 IST
Last Updated 12 ಏಪ್ರಿಲ್ 2021, 5:34 IST
ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಕೆರೆಯನ್ನು ಯಶೋಮಾರ್ಗ ಪ್ರತಿಷ್ಠಾನವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಿದೆ. ಆ ಕೆರೆಯಲ್ಲಿ ನೀರು ನಿಂತಿದೆ
ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಕೆರೆಯನ್ನು ಯಶೋಮಾರ್ಗ ಪ್ರತಿಷ್ಠಾನವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಿದೆ. ಆ ಕೆರೆಯಲ್ಲಿ ನೀರು ನಿಂತಿದೆ   

ಕೊಪ್ಪಳ: ಎಲ್ಲರಿಗಿಂತಲೂ ಬರದ ನಾಡಿನ ಜನತೆಗೆ ನೀರಿನ ಮಹತ್ವ ಹೆಚ್ಚು ಗೊತ್ತು. ಆದರೆ ಸಂರಕ್ಷಣೆ ವಿಧಾನದ ಕೊರತೆಯಿಂದ ಸತತ ಬರಗಾಲ ಎದುರಿಸಿ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹಚ್ಚಿಕೊಂಡು ದಶಕಗಳ ಕಾಲ ಕಳೆದಿದೆ.

ಜಲಜೀವನ್ ಮಿಷನ್, ಕೆರೆ ತುಂಬಿಸುವ ಯೋಜನೆ, ಹನಿ ನೀರಾವರಿ, ಅಂತರ್ಜಲ ರಕ್ಷಣೆ, ಸಂವರ್ಧನೆ, ಪುನಶ್ಚೇತನ ಎಂಬ ಚಂದದ ಹೆಸರುಗಳನ್ನು ಇಟ್ಟುಕೊಂಡರೂ ಜಿಲ್ಲೆಯ ಕೆರೆಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಜನ-ಜಾನುವಾರುಗಳ ನೀರಿನ ದಾಹ ತೀರಿಸುವ ಇಂತಹ ಕೆರೆಗಳನ್ನು ನಿರ್ಮಿಸಬೇಕಾದ, ಉಳಿಸಬೇಕಾದ ಇಚ್ಛಾಶಕ್ತಿಯೂ ಸಣ್ಣ ನೀರಾವರಿ ಇಲಾಖೆಗೆ ಇಲ್ಲ. ಜಂಗಲ್‌ ಕಟಿಂಗ್, ಸಣ್ಣ, ಪುಟ್ಟ ಕಾಮಗಾರಿ ಮಾಡಿ ಬಿಲ್‌ ಎತ್ತಿ, ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೆರೆ ಎಂಬ ಬೋರ್ಡ್ ನೇತು ಹಾಕಿದರೆ ಅಲ್ಲಿಗೆ ಕೆಲಸ ಮುಗಿಯಿತು.

ಸಣ್ಣ ನೀರಾವರಿ ಇಲಾಖೆ ಇಲ್ಲಿ ಇದ್ದರೂ ಇದರ ವಿಭಾಗೀಯ ಕಚೇರಿ ವಿಜಯಪುರದಲ್ಲಿ ಇದೆ. ಮಾಹಿತಿ ಕೊರತೆಯಿಂದ ಜನರು ಅತ್ತ ಹೋಗುವುದಿಲ್ಲ. ಗೊತ್ತಿದ್ದವರು ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸಿಕೊಂಡು ತಮ್ಮ ‘ಜ್ಞಾನ; ಸಂಪತ್ತು’ ಹೆಚ್ಚಿಸಿಕೊಂಡರೆ ಮುಗಿಯಿತು. ಅವರು ವರ್ಷದ ಉದ್ದಕ್ಕೂ ಫೈಲ್‌, ಕಚೇರಿ, ತನಿಖೆಯಲ್ಲಿಯೇ ಕಾಲ ಕಳೆದು ಶಾಶ್ವತವಾದ ಕೆರೆಯನ್ನು ಕಟ್ಟಿಸಿ ಊರಿಗೆ ಉಪಕಾರ ಮಾಡಿದ ಯಾವುದೇ ಉದಾಹರಣೆ ಇಲ್ಲ.

ADVERTISEMENT

ಪುನಶ್ಚೇತನಕ್ಕೆ ಪ್ರೇರಣೆ: ಇಲ್ಲಿನ ನೀರಿನ ಬವಣೆ ಕಂಡು ಕನ್ನಡದ ಖ್ಯಾತ ನಟ ಯಶ್‌ ತಮ್ಮ ಯಶೋಮಾರ್ಗ ಪ್ರತಿಷ್ಠಾನದ ಮೂಲಕ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಕೆರೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪುನಶ್ಚೇತನ ಕೈಗೊಂಡು ಕೆರೆಯಲ್ಲಿ ನೀರು ನಿಂತು ಪಶು, ಪಕ್ಷಿ, ಜನ, ಜೀವನಕ್ಕೆ ಅನುಕೂಲವಾದದ್ದು ಒಂದು ಮಾದರಿ ಕಾರ್ಯವಾಗಿ ನಾಡಿನ ತುಂಬ ಪ್ರಸಿದ್ಧಿಯನ್ನು ಪಡೆದಿತ್ತು.

ದಟ್ಟ ಒಣಭೂಮಿ, ಬಿಸಿಲಿನ ಮರಿಯಾದ ಯಲಬುರ್ಗಾದ ಬಡತನ, ಬರಗಾಲದ ಬವಣೆ ಕಂಡು ಕೆರೆಯನ್ನು ಅಭಿವೃದ್ಧಿಪಡಿಸಿದರೆ ಉಂಟಾಗುವ ಉಪಯೋಗದ ಕುರಿತು ಜನರ ಅರಿವಿಗೆ ಬಂತು. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ನೆಚ್ಚಿಕೊಂಡರೆ ಈ ಜನ್ಮ ಸಾಕಾದು ಎಂಬ ಉದ್ದೇಶದಿಂದ ತಾವೇ ಮುಂದೆ ನಿಂತು ಪುನಶ್ಚೇತನ ಕಾರ್ಯಕ್ಕೆ ಕೈ ಹಾಕಿದ್ದರಿಂದ ಕೆರೆಯಲ್ಲಿ ನೀರು ಕಾಣುವಂತೆ ಆಯಿತು.

ಗವಿಮಠದ ಕಾರ್ಯ:ಮೂರು ವರ್ಷಗಳ ಈಚೆಗೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಜಲಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಜಲಜಾತ್ರೆಯನ್ನೇ ಮಾಡಿದರು. ಕುಷ್ಟಗಿ ತಾಲ್ಲೂಕಿನ ನಿಡಶೇಸಿ, ಕೊಪ್ಪಳ ತಾಲ್ಲೂಕಿನ ಕಲ್ಲತಾವರಗೇರಾ, ಗಿಣಗೇರಾ, ಹಿರೇಹಳ್ಳವನ್ನು ತಮ್ಮ ಭಕ್ತಿ-ಶಕ್ತಿಯ ಮೂಲಕ ಸಾವಿರಾರು ಜನರ ಸಹಭಾಗಿತ್ವ ಪಡೆದು ಪುನಶ್ಚೇತನ ಕಾರ್ಯಕ್ಕೆ ಕೈಹಾಕಿದ್ದು, ಸರ್ಕಾರ ಮಾಡದಷ್ಟು ಕೆಲಸವನ್ನು ಒಬ್ಬ ಸ್ವಾಮೀಜಿ, ಮಠ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.

ನಿಡಶೇಶಿ ಕೆರೆಯ ಒಡ್ಡು ನಿರ್ಮಾಣ ಮಾಡಿ ನೀರು ನಿಲ್ಲುವಂತೆ ಮಾಡಿದ್ದಲ್ಲದೆ, ಹಿರೇವಂಕಲಕುಂಟಾ ಸಮೀಪದ ಕಲ್ಲತಾವರಗೇರಾದ ಕೆರೆಯನ್ನು ಅಭಿವೃದ್ಧಿ ಮಾಡಿದ್ದರಿಂದ ಸುತ್ತಲಿನ ಕೊಳವೆಬಾವಿಗಳಿಗೆ ಮರುಜೀವ ಬಂದಿತು. ಈಗ ಕೈಗಾರಿಕೆ ಹಬ್ ಗಿಣಗೇರಾದ ಬೃಹತ್ ಕೆರೆ ಪುನಶ್ಚೇತನಕ್ಕೆ ಕೈಹಾಕಿದ್ದು, ಅಭಿವೃದ್ಧಿ ಕಾಣುತ್ತಿದೆ. ಈಚೆಗೆ ಬಿ.ಹೊಸಳ್ಳಿ ಕೆರೆ ರಕ್ಷಣೆಗೆ ಭೂಮಿಪೂಜೆ ಮಾಡಲಾಗಿದೆ.

ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಸಣ್ಣ ಕೆರೆಗಳು ಇದ್ದು, ಕೆಲವು ಅತಿಕ್ರಮಣಗೊಂಡರೆ, ಕೆಲವು ಕಡೆ ನೀರಿನ ಮೂಲಗಳು ಬಂದ್‌ ಆಗಿವೆ. ಇದಕ್ಕೆ ಅತಿಯಾದ ಸ್ವಾರ್ಥ, ಹಸ್ತಕ್ಷೇಪದಿಂದ ಕೆರೆಯ ಒಡಲು ಸೊರಗುತ್ತಿವೆ. ಕುಕನೂರು, ಯಲಬುರ್ಗಾ, ಹನುಮಸಾಗರ, ತಾವರಗೇರಾ, ಕನಕಗಿರಿ ಭಾಗದಲ್ಲಿ ಜಲಮೂಲಗಳನ್ನು ಸಂರಕ್ಷಣೆಯ ಕಾರ್ಯ ಮಾಡಬೇಕಾಗಿದೆ. ಎಡದಂಡೆ ತುಂಗಭದ್ರಾ ನದಿಯಿಂದ ಕಾರಟಗಿ, ಗಂಗಾವತಿ ನೀರು ಕಂಡರೂ ಅತಿಯಾದ ಅಮೃತ ವಿಷ ಎನ್ನುವಷ್ಟು ಮಟ್ಟಿಗೆ ನೀರು ಪೋಲು ಮಾಡುತ್ತಾ ಸಾಗಿರುವುದು ಮತ್ತೊಂದು ವೈರುಧ್ಯ.

ಸಾರ್ವಜನಿಕರ ಸಹಭಾಗಿತ್ವ: ಕೆರೆ ಸ್ವಚ್ಛತೆ, ರಕ್ಷಣೆ, ನಿರ್ವಹಣೆ ಮತ್ತು ಜಲಸಂರಕ್ಷಣೆಗೆ ಸಾರ್ವಜನಿಕರೇ ಸಹಭಾಗಿತ್ವ ವಹಿಸಿ ಇಲ್ಲಿನ ಉದ್ಯಮ, ಉದ್ಯಮಿಗಳು, ದಾನಿಗಳು, ವಿವಿಧ ಸಮಾಜದ ಸಂಘಟನೆ ಮುಖಂಡರು ದೇಣಿಗೆ ನೀಡಿದ್ದು, ಆ ಹಣದಲ್ಲಿ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ ಮಾಡುವ ಕೆಲಸವನ್ನು ಸಾರ್ವಜನಿಕರೇ ಮಾಡುತ್ತಿದ್ದು, ಕೆರೆ ರಕ್ಷಣೆಗೆ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತಿದೆ. ನೀರಿನ ಮಹತ್ವ ಅರಿತುಕೊಂಡಿರುವ ಕೆಲವು ಜನಪರ ವ್ಯಕ್ತಿಗಳು ಈ ಮಾದರಿ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದು, ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.