ADVERTISEMENT

ಕುಷ್ಟಗಿ | ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಿ: ದೊಡ್ಡನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:24 IST
Last Updated 17 ಸೆಪ್ಟೆಂಬರ್ 2025, 5:24 IST
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆಗೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿದ್ದರು. ರೈತರು, ಕೆಬಿಜೆಎನ್‌ಎಲ್‌ ಅಧಿಕಾರಿಗಳು ಇದ್ದರು
ಕುಷ್ಟಗಿ ತಾಲ್ಲೂಕು ಹಿರೇನಂದಿಹಾಳ ಕೆರೆಗೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿದ್ದರು. ರೈತರು, ಕೆಬಿಜೆಎನ್‌ಎಲ್‌ ಅಧಿಕಾರಿಗಳು ಇದ್ದರು   

ಕುಷ್ಟಗಿ: ‘ಕೆರೆ ತುಂಬಿಸುವ ಯೋಜನೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಗೆ ಬರುವ ಇತರೆ ಕೆರೆಗಳ ಬಾಕಿ ಕೆಲಸ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ನೀರು ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಕೆಬಿಜೆಎನ್‌ಎಲ್‌ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಸಮೀಪದ ಹಿರೇವಂಕಲಕುಂಟಾ ಬಳಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ‘18 ಕೆರೆಗಳ ಪೈಕಿ ಈಗಾಗಲೇ 15 ಕೆರೆಗಳಿಗೆ ನೀರು ಬರುತ್ತಿದೆ. ಟೆಂಗುಂಟಿ, ಹಿರೇಮನ್ನಾಪುರ ಮತ್ತು ಗಂಗನಾಳ ಕೆರೆಗಳಿಗೆ ಇನ್ನೂ ಮುಖ್ಯಕೊಳವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದರು. ‘ಭೂಮಿಗೆ ಪರಿಹಾರಧನ ಬಂದಿಲ್ಲ ಎಂದು ರೈತರು ಕೊಳವೆ ಅಳವಡಿಸುವುದಕ್ಕೆ ಅಡ್ಡಿಪಡಿಸಿದ್ದರಿಂದ ಕೆಲಸ ವಿಳಂಬವಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಅನಗತ್ಯವಾಗಿ ಯಾರಾದರೂ ಅಡ್ಡಿಪಡಿಸಿದರೆ ಒಪ್ಪಿಕೊಳ್ಳಲು ಆಗುವುದಿಲ್ಲ, ಅಗತ್ಯವಾದರೆ ಪೊಲೀಸ್‌ ರಕ್ಷಣೆಯಲ್ಲಿ ಕೆಲಸ ನಡೆಸಿ ಎರಡು ತಿಂಗಳ ಒಳಗೆ ಕೆರೆ ತುಂಬಿಸಲು ಅಗತ್ಯ ಕ್ರಮ ತೆಗದುಕೊಳ್ಳಿ’ ಎಂದು ಶಾಸಕರು ಸೂಚಿಸಿದರು ಎಂದು ಸಭೆಯ ನಂತರ ಮೂಲಗಳು ತಿಳಿಸಿದವು.

ADVERTISEMENT

ಕೆರೆ ತುಂಬಿಸುವ ಯೋಜನೆಯಲ್ಲಿ ಭೂಮಿ ನೀಡಿರುವ ರೈತರಿಗೆ ವಿಳಂಬವಿಲ್ಲದೆ ಪರಿಹಾರಧನ ಮಂಜೂರಾಗಬೇಕು, ಅಂತಿಮ ಆದೇಶವಾದರೂ ಇನ್ನೂ ಕೆಲವು ರೈತರಿಗೆ ಪರಿಹಾರಧನ ಜಮೆಯಾಗಿಲ್ಲ ಎಂಬ ಬಗ್ಗೆ ಬಹಳಷ್ಟು ರೈತರಿಂದ ದೂರುಗಳು ಬಂದಿವೆ. ಈ ಸಮಸ್ಯೆ ಮುಂದುವರೆಯದಂತೆ ನೋಡಿಕೊಳ್ಳಲು ಸಭೆಯಲ್ಲಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ತಾಕೀತು ಮಾಡಿದರು.

ಮುದೂಟಗಿ ಬಳಿ ಕಿತ್ತು ಬಂದಿರುವ ಏರ್‌ವಾಲ್ವ್ ದುರಸ್ತಿ ವಿಚಾರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದುರಸ್ತಿ ಕೆಲಸ ನಡೆಸಬೇಕು ಎಂದು ಶಾಸಕ ತಿಳಿಸಿದರು. ಎರಡು ಮೂರು ದಿನಗಳಲ್ಲಿ ದುರಸ್ತಿ ಮುಗಿಯಲಿದ್ದು ಪುನಃ ನೀರು ಸರಬರಾಜು ಆಗಲಿದೆ ಎಂದು ಎಂಜಿನಿಯರ್‌ ವಿವರಿಸಿದರು.

ಹಿರೇನಂದಿಹಾಳ ಕೆರೆಗೆ ಹೆಚ್ಚಿನ ನೀರು ಬರುವುದಿಲ್ಲ, ಸಣ್ಣ ಗಾತ್ರದ ಕೊಳವೆ ಅಳವಡಿಸಲಾಗಿದೆ, ಹೆಚ್ಚಿನ ನೀರು ಶೇಖರಣೆಗೆ ಅಧಿಕಾರಿಗಳಿಗೆ ಸೂಚಿಸುವಂತೆ ಕೆರೆ ಪ್ರದೇಶಕ್ಕೆ ಕೆಬಿಜೆಎನ್‌ಎಲ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಶಾಸಕ ದೊಡ್ಡನಗೌಡ ಅವರಿಗೆ ಅಲ್ಲಿಯ ರೈತರು ಮನವಿ ಮಾಡಿದರು. ಹೆಚ್ಚಿನ ನೀರು ಸಂಗ್ರಹಕ್ಕೆ ಸಾಧ್ಯವಿರುವ ಕ್ರಮ ಕೈಗೊಳ್ಳಲು ಅಧಿಕಾರಿಳಿಗೆ ಶಾಸಕ ಸೂಚಿಸಿದರು.

ಅಧೀಕ್ಷಕ ಎಂಜಿನಿಯರ್‌ ರಮೇಶ್‌ ರಾಠೋಡ, ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ ರೆಡ್ಡಿ, ಕುಷ್ಟಗಿ, ಇಳಕಲ್‌ ಮತ್ತು ಯಲಬುರ್ಗಾ ಕೆಬಿಜೆಎನ್‌ಎಲ್‌ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ರಮೇಶ ನೇಲಗಿ, ಶಿವಪ್ಪ ಛಲವಾದಿ, ಚನ್ನಪ್ಪ. ಬಿಜೆಪಿ ಮುಖಂಡ ಕೆ.ಮಹೇಶ ಹಾಗೂ ಇತರೆ ಎಂಜಿನಿಯರ್‌ಗಳು, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಭೆಯಲ್ಲಿದ್ದರು.

ರೈತರ ಆಕ್ರೋಶ: ಹಿರೇವಂಕಲಕುಂಟಾ ಪ್ರವಾಸಿ ಮಂದಿರದ ಬಳಿ ಸಭೆ ನಡೆಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಅನೇಕ ರೈತರು ಸ್ವಾಧೀನಗೊಂಡ ಭೂಮಿಯ ಮಾಲೀಕರಿಗೆ ಪರಿಹಾರಧನ ಬಿಡುಗಡೆ ಮಾಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಏನಾದರೂ ಒಂದು ನೆಪ ಹೇಳಿ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿದರು ಎಂಬುದು ಗೊತ್ತಾಗಿದೆ.

ಯಲಬುರ್ಗಾದಲ್ಲಿ ಕುಷ್ಟಗಿ ಕ್ಷೇತ್ರದ ಸಭೆ! 
ಕುಷ್ಟಗಿ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕೆರೆ ತುಂಬಿಸುವ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಪಟ್ಟಣದಲ್ಲಿಯೇ ನಡೆಸಬಹುದಾಗಿದ್ದರೂ ಯಲಬುರ್ಗಾ ಕ್ಷೇತ್ರದ ಹಿರೇವಂಕಲಕುಂಟಾ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪ್ರವಾಸಿ ಮಂದಿರದಲ್ಲಿ ನಡೆಸಿದ್ದು ಚರ್ಚೆಗೆ ಗ್ರಾಸ ಒದಗಿಸಿತು. ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಕೆಬಿಜೆಎನ್ಎಲ್‌ ಹಿರಿಯ ಎಂಜಿನಿಯರ್‌ಗಳು ಬಂದಿದ್ದರಿಂದ ಇಲ್ಲಿಯ ರೈತರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕೆ ಅನುಕೂಲವಾಗುತ್ತಿತ್ತು. ಅಲ್ಲದೆ ದೂರದ ಪ್ರದೇಶದಲ್ಲಿ ಸಭೆ ಇರುವುದು ಬಹುತೇಕ ರೈತರಿಗೆ ಗೊತ್ತಾಗಲಿಲ್ಲ ಗೊತ್ತಿದ್ದರೂ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕೆಲ ರೈತರು ನಂತರ ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.