ಗಂಗಾವತಿ: ‘ಯುವಜನರು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿ, ಕೋಮುದ್ವೇಷದ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ’ ಎಂದು ಕರ್ನಾಟಕ ಪ್ರದೇಶದ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥಗೌಡ ಹೇಳಿದರು.
ನಗರದ ರಾಯಚೂರು ರಸ್ತೆಯಲ್ಲಿನ ಖಾಸಾಗಿ ಹೊಟೇಲ್‌ನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಬುಧವಾರ ನಡೆದ ಯುವಶಕ್ತಿ ಪ್ರತಿಜ್ಞಾ ಸ್ವೀಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕೊಪ್ಪಳ ಯುವಜನರು ಕೊಡುಗೆ ಅಪಾರ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಈ ಬಾರಿ ಮತ್ತೆ ಕಾಂಗ್ರೆಸ್ ಗೆಲ್ಲಿಸಿ, ಗತವೈಭವ ಮರಳಿ ತಂದಿರುವುದು ಖುಷಿಯ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆ ಮೂಲಕ ಫಲಾನುಭವಿಗಳಿಗೆ ₹80 ಸಾವಿರ ಕೋಟಿ ತಲುಪಿದೆ. ಕೊಪ್ಪಳ ಜಿಲ್ಲೆಯಲ್ಲಿ ಶೇ 98ರಷ್ಟು ಗ್ಯಾರಂಟಿಗಳು ಅನುಷ್ಠಾನಗೊಂಡಿವೆ. ಬಿಜೆಪಿಯು ಗ್ಯಾರಂಟಿಗಳಿಂದ ಜನ ಸೋಮಾರಿಗಳಾಗುತ್ತಾರೆ ಎಂದು ಟೀಕಿಸಿದ್ದರು. ಈಗ ಬಿಜೆಪಿಯವರೇ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿ ಮಾದರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ’ ಎಂದು ಹೇಳಿದರು.
‘ದೇಶದಲ್ಲಿ ವ್ಯಾಪಕವಾದ ಬೆಲೆ ಏರಿಕೆ, ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನುದಾನ ತಾರತಮ್ಯದ ಭಾಗವಾಗಿ ಕೇಂದ್ರ ಸರ್ಕಾರದ ವಿರುದ್ಧ ನಾವೆಲ್ಲರೂ ಹೋರಾಡಬೇಕು. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿತಾಸಕ್ತಿ ಬಗ್ಗೆ ಮಾತನಾಡದೆ, ಆಂತರಿಕ ಕಲಹಗಳಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಮಾಹಿತಿ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಅಮರೇಗೌಡ ಬಯ್ಯಪುರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗೇಶ ಕಲ್ಗುಡಿ, ಸಿದ್ದು ಹೊಸಳ್ಳಿ, ಗವಿಸಿದ್ದಣ್ಣ, ರೆಡ್ಡಿ ಶ್ರೀನಿವಾಸ, ರವಿನಾಯಕ, ಬಾಬರ್, ಸಿದ್ದಯ್ಯ ಹಿರೇಮಠ ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.