ADVERTISEMENT

‘ದ್ವೇಷ ಅಳಿಸೋಣ, ದೇಶ ಉಳಿಸೋಣ’ ಅಭಿಯಾನ 10ರ ತನಕ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 16:41 IST
Last Updated 3 ನವೆಂಬರ್ 2023, 16:41 IST

ಕೊಪ್ಪಳ: ‘ಭಾರತ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಇರುವ ದೇಶವಾಗಿದೆ. ಕೆಲವರು ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನ. 1ರಿಂದ ಆರಂಭಿಸಲಾಗಿರುವ ದ್ವೇಷ ಅಳಿಸೋಣ, ದೇಶ ಉಳಿಸೋಣ ಅಭಿಯಾನ 10ರ ತನಕ ರಾಜ್ಯದಾದ್ಯಂತ ನಡೆಯಲಿದೆ’ ಎಂದು ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್‌ ಹುಸೇನ್‌ ತಿಳಿಸಿದರು.

‘ಕೆಲವೇ ಕೆಲವರ ಸ್ವಾರ್ಥಕ್ಕೆ ಅನೇಕರು ಬಲಿಯಾಗುತ್ತಿದ್ದಾರೆ. ಸುಳ್ಳು ಸುದ್ದಿಗಳ ಮೂಲಕ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಜನ ನೆಮ್ಮದಿಯಿಂದ ಬದುಕುವಂತೆ ಮಾಡಲು ಅಭಿಯಾನ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಲ್ಲಿ ಕಡಿಮೆಯಾಗುತ್ತಿರುವ ರಾಜಕೀಯ ಸ್ಥಾನ ಮತ್ತು ಅದರ ಪರಿಣಾಮದ ಬಗ್ಗೆ ಈ ವೇಳೆ ಜಾಗೃತಿ ಮೂಡಿಸಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಾದ್ಯಂತ ಪಕ್ಷದ ರಾಜ್ಯ ಕಚೇರಿ ಮತ್ತು ರಾಜ್ಯದ ಎಲ್ಲ ಘಟಕಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನದ ವೇಳೆ ಭಿತ್ತಿಪತ್ರ ಬಿಡುಗಡೆ, ಪತ್ರಿಕಾಗೋಷ್ಠಿ, ವಿಡಿಯೊ ಬಿಡುಗಡೆ, ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಬೀದಿನಾಟಕ ಬೈಕ್‌ ರ್‍ಯಾಲಿ ಮತ್ತು ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿಮುದ್ದೀನ್‌, ಜಿಲ್ಲಾಧ್ಯಕ್ಷ ಆದಿಲ್‌ ಪಟೇಲ್‌, ಮಹಿಳಾ ಘಟಕದ ಅಧ್ಯಕ್ಷೆ ಸಬಿಯಾ ಪಟೇಲ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮಾ ಜಹಾಂ ಮತ್ತು ಜಿಲ್ಲೆಯ ಅಭಿಯಾನದ ಸಂಚಾಲಕ ಏಜಾಜ್‌ ಶೇಖ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.