ADVERTISEMENT

ಸಮಾಜ ನೋಡಿ ಸಾಹಿತ್ಯ ರಚಿಸಿ: ಗಣಪತಿ ಲಮಾಣಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:23 IST
Last Updated 26 ನವೆಂಬರ್ 2022, 5:23 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಉಪನ್ಯಾಸ, ಮಹಿಳೆಯರಿಗೆ ಮುಕ್ತ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭವನ್ನು ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಉಪನ್ಯಾಸ, ಮಹಿಳೆಯರಿಗೆ ಮುಕ್ತ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭವನ್ನು ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಉದ್ಘಾಟಿಸಿದರು   

ಕೊಪ್ಪಳ: ‘ಸಾಹಿತಿಗಳು ಸಮಾಜವನ್ನು ನೋಡಿ ಸಾಹಿತ್ಯ ರಚನೆ ಮಾಡಬೇಕು, ಸಾಹಿತ್ಯದ ಮೂಲಕ ಸಮಾಜ ತಿದ್ದಬೇಕು’ ಎಂದು ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕೊಪ್ಪಳ ತಾಲ್ಲೂಕು ಕಸಾಪ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ, ಮಹಿಳೆಯರಿಗೆ ಮುಕ್ತ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ನಾಡು ನುಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಬೆಳಸಬೇಕು. ನಾವು ಕನ್ನಡ ಸಾಹಿತ್ಯವನ್ನು ಮರೆಯಬಾರದು. ಲೇಖನಿಯು ಖಡ್ಗಕ್ಕಿಂತ ಹರಿತವಾಗಿದ್ದು, ಎಲ್ಲರೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಹೊಸಬಂಡಿ ಹರ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ನಿಂಗಪ್ಪ ಕಂಬಳಿ ‘ಕನ್ನಡ ಸಾಹಿತ್ಯಕ್ಕೆ ತಿರುಳ್ಗನ್ನಡ ನಾಡಿನ ಕೊಡುಗೆ’ ಕುರಿತು ವಿಶೇಷ ಉಪನ್ಯಾಸದಲ್ಲಿ ‘ಕನ್ನಡ ಸಾಹಿತ್ಯಕ್ಕೆ ನಮ್ಮ ತಿರುಳ್ಗನ್ನಡ ನಾಡು ಬಹಳ ಕೊಡುಗೆ ನೀಡಿದೆ. ನಮ್ಮ ನಾಡು ಬಂಡಾಯ, ದಲಿತ, ಲಲಿತ, ಚುಟುಕು ಮತ್ತು ಮಕ್ಕಳ ಸೇರಿದಂತೆ ಎಲ್ಲಾ ಸಾಹಿತ್ಯ ವರ್ಗಕ್ಕೆ ಅಪಾರ ಕೊಡುಗೆ ನೀಡಿದೆ. ಗ್ರಾಮೀಣ ಪ್ರದೇಶದ ಜನರಿಗೆ ಜನಪದ ಸಾಹಿತ್ಯವೇ ಇಷ್ಟ’ ಎಂದರು.

ಬಯಲಾಟ ಕ್ಷೇತ್ರಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಂಕರಪ್ಪ ಹೊರಪೇಟೆ ಮತ್ತು ಚಿತ್ರಕಲೆ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಣ್ಣರಂಗಪ್ಪ ಚಿತ್ರಕಾರ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ 18 ಜನ ಕವಿಯತ್ರಿಯರು ಪಾಳ್ಗೊಂಡಿದ್ದರು. ಅಧ್ಯಕ್ಷತೆಯನ್ನು ಪುಷ್ಪಲತಾ ರಾ. ಏಳಬಾವಿ ವಹಿಸಿದ್ದರು.

ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್‌ ಪಾಟೀಲ, ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪೊಲೀಸ್ ಪಾಟೀಲ್‌, ರಾಮಚಂದ್ರಗೌಡ ಬಿ ಗೊಂಡಬಾಳ, ಅಶೋಕ ಕುಂಬಾರ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ, ಡಾ. ನರಸಿಂಹ, ಶಿವಪ್ರಸಾದ ಹಾದಿಮನಿ, ಬಾನದ ಮಂನಜುನಾಥ, ಶ್ರೀಕಾಂತ್‌, ಮಂಜಪ್ಪ ಚಿಕ್ಕಣಿಕಿ, ಮಹೇಶ ಪೂಜಾರ ಪಾಲ್ಗೊಂಡಿದ್ದರು.

ಪ್ರಬಂಧ: ರಕ್ಷಿತಾ ಪ್ರಥಮ

‘ನಮ್ಮ ಭಾಷೆ ನಮ್ಮ ಹೆಮ್ಮೆ’ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅಳವಂಡಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ರಕ್ಷಿತಾ ಬೆಟಗೇರಿ, ಭಾಗ್ಯನಗರದ ಜ್ಞಾನ ಬಂಧು ಸಿ.ಬಿ.ಎಸ್.ಇ. ಶಾಲೆಯ ದಿವ್ಯಾ ಪಾಟೀಲ ಮತ್ತು ಮಾಸ್ತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪುಷ್ಪಾಂಜಲಿ ಅವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.