ಕೊಪ್ಪಳ: ‘ಕಾಯಕ ಮತ್ತು ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು ಕಾಯಕ ಯೋಗಿ ಎನಿಸಿಕೊಂಡಿದ್ದಾರೆ. ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಂಡು ಇತರರಿಗೂ ತಿಳಿಸಬೇಕು’ ಎಂದು ಚಿತ್ರದುರ್ಗ ಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ‘ಮಡಿವಾಳ ಮಾಚಿದೇವರು ತಮ್ಮ ಕಾಯಕ ಮತ್ತು ವಚನಗಳ ಮೂಲಕ ಸಮಸ್ತ ಮಾನವ ಕುಲಕ್ಕೆ ಆದರ್ಶವಾಗಿದ್ದಾರೆ. ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ’ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ‘ಮಡಿವಾಳ ಸಮಾಜದವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲರೂ ಆರ್ಥಿಕವಾಗಿ ಸಬಲರಾಗಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ನಗರಸಭೆ ವತಿಯಿಂದ ತಮ್ಮ ಯಾವುದೇ ಮೂಲ ಸೌಕರ್ಯಗಳ ಅಭಿವೃದ್ಧಿಗಳ ಕುರಿತು ಮನವಿ ಇದ್ದಲ್ಲಿ ಅನುದಾನ ಒದಗಿಸಲಾಗುವುದು’ ಎಂದರು.
ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನವೀನ್ ಕುಮಾರ್ ಬಿ. ಅವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಡಿವಾಳ ಸಮಾಜದ ಪ್ರಮುಖರಾದ ಯೋಗೇಶ್ ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಅಕ್ಬರಪಾಶ ಪಲ್ಟನ್, ಸದಸ್ಯ ಅಜೀಮುದ್ದಿನ್ ಅತ್ತಾರ್, ಅರುಣ್ ಶೆಟ್ಟಿ, ಬಿಜೆಪಿ ಮುಖಂಡ ಮಹಾಂತೇಶ ಪಾಟೀಲ್ ಮೈನಳ್ಳಿ, ಉದ್ಯಮಿ ಸೋಮಶೇಖರ್ ಹಿಟ್ನಾಳ, ಮಡಿವಾಳ ಸಮಾಜದ ಮುಖಂಡರಾದ ಕೃಷ್ಣ ಎಸ್. ಮಡಿವಾಳ, ಎಂ.ಕೆ. ಹನುಮಂತಪ್ಪ, ಶಂಕ್ರಪ್ಪ ಹಾಲ್ಕೆರಿ, ರಾಮಣ್ಣ ಮಡಿವಾಳರ, ಬಸವರಾಜ ಬೆಳಗಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Cut-off box - ಮೆರವಣಿಗೆ ವೇಳೆ ಭಾವೈಕ್ಯ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಮೆರವಣಿಗೆ ವೇಳೆ ಬಿರುಬಿಸಿಲಿನಲ್ಲಿಯೂ ಕುಂಭ ಹೊತ್ತ ಸಾಗಿದ ಮಹಿಳೆಯರಿಗೆ ಮುಸ್ಲಿಂ ಸಮುದಾಯದ ಯುವಕರು ನೀರು ಮತ್ತು ಮಜ್ಜಿಗೆ ನೀಡಿ ಭಾವೈಕ್ಯ ಮೆರೆದರು. ಚಾಲನೆ: ಮೆರವಣಿಗೆಗೆ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ಚಾಲನೆ ನೀಡಿದರು. ಗರದ ಕೋಟೆ ರಸ್ತೆಯ ಅಕ್ಕಮಹಾದೇವಿ ದೇವಾಲಯದಿಂದ ಸಾಹಿತ್ಯ ಭವನದ ತನಕ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.