
ಕೊಪ್ಪಳ: ಸಂಕ್ರಮಣದ ಅಂಗವಾಗಿ ಜಿಲ್ಲೆಯಾದ್ಯಂತ ಗುರುವಾರ ಸ್ನೇಹಿತರು ಹಾಗೂ ಕುಟುಂಬದವರು ಒಂದೆಡೆ ಸೇರಿ ಸಹಭೋಜನ ನಡೆಸಿದರೆ, ಧಾರ್ಮಿಕ ತಾಣಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವ ಸಂಕ್ರಾಂತಿ ಹೊಸ ವರ್ಷದ ಮೊದಲ ಹಬ್ಬವಾಗಿದೆ. ಹೀಗಾಗಿ ಎಲ್ಲರಲ್ಲಿಯೂ ಹಬ್ಬದ ಹಿಗ್ಗು ಕಂಡುಬಂದಿತು. ಕೊಪ್ಪಳದ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಮುಗಿದು ಹತ್ತು ದಿನಗಳಾಗಿದ್ದು, ಜನ ಬರುವ ಯಾತ್ರೆ ಸತತವಾಗಿ ಮುಂದುವರಿದಿದೆ. ಹಬ್ಬದ ದಿನದಂದು ಸರ್ಕಾರಿ ರಜೆಯೂ ಇದ್ದ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬಂದು ಗದ್ದುಗೆಯ ದರ್ಶನ ಪಡೆದರು.
ಜನ ಮಹಾರಥೋತ್ಸವಕ್ಕೆ ನಮಸ್ಕರಿಸಿ, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಆಟಿಕೆ ಲೋಕದಲ್ಲಿ ಸಮಯ ಕಳೆದರು. ಸಂಜೆಯಾದರೂ ಮಹಾದಾಸೋಹಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತಿತ್ತು. ಅವಘಡಕ್ಕೆ ಅವಕಾಶ ಕೊಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧ ಅವರೇ ಭದ್ರತಾ ಕಾರ್ಯ ನಿರ್ವಹಿಸಿದರು. ಪೊಲೀಸ್ ಸಿಬ್ಬಂದಿ ಬಂದ ಭಕ್ತರನ್ನು ನಿಯಂತ್ರಿಸಿದರು.
ತಾಲ್ಲೂಕಿನ ಹಿರೇಸಿಂಧೋಗಿ ಗ್ರಾಮದ ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ಸಜ್ಜಕ ಸೇವೆ ಮಾಡಿಸಿದ್ದರು. ಬಂದ ಭಕ್ತರು ಗವಿಮಠದ ಜಾತ್ರೆಯಲ್ಲಿಯೇ ಸಂಕ್ರಾಂತಿ ಸಿಹಿ ಸವಿದರು.
ಕುಕನೂರಿನ ಮಹಾಮಾಯಿ ದೇವಸ್ಥಾನ, ತಾಲ್ಲೂಕಿನ ಇಟಗಿಯ ಮಹಾದೇವ ದೇವಾಲಯ ಹೀಗೆ ಅನೇಕ ಕಡೆ ವಿಶೇಷ ಪೂಜೆಗಳು ಜರುಗಿದವು. ಬೆಳಗಿನ ಜಾವದಿಂದ ರಾತ್ರಿ ತನಕವೂ ದೇವಸ್ಥಾನಗಳು ಭಕ್ತರಿಗಾಗಿ ತೆರೆದಿದ್ದವು. ಹುಲಿಗಿ ಬಳಿಯ ತುಂಗಭದ್ರ ನದಿಯಲ್ಲಿ ಅನೇಕರು ಸ್ನಾನ ಮಾಡಿದರೆ, ಶಿವಪುರ ಬಳಿಯ ಮಾರ್ಕಂಡೇಶ್ವರದಲ್ಲಿ ಪುಣ್ಯಸ್ನಾನ, ದೇವರ ದರ್ಶನದ ಬಳಿಕ ಸಹ ಭೋಜನ ಮಾಡಿದ ಅನೇಕ ಕುಟುಂಬಗಳು ಕಂಡುಬಂದವು.
ಮುದ್ದಾಬಳ್ಳಿಯಲ್ಲಿ ಸಂಕ್ರಾಂತಿ ಆಚರಣೆ
ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚೇತನ ಕಾರ್ಯಕ್ರಮದ ಪ್ರಯುಕ್ತವಾಗಿ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಮುಖ್ಯೋಪಾಧ್ಯಾಯಿನಿ ರೇಖಾ ಕುಲಕರ್ಣಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮಕ್ಕಳಿಂದ ಹಳ್ಳಿ ಸೊಬಗಿನ ಸುಗ್ಗಿಯ ಹಾಡಿನ ನೃತ್ಯ ಹಾಡುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ಎಪಿಎಫ್ ಶೋಭನಾ ಉಪನಿರ್ದೇಶಕ (ಅಭಿವೃದ್ಧಿ) ಎಲ್.ಡಿ. ಜೋಶಿ ಸಚೇತನ ಕಾರ್ಯಕ್ರಮದ ನೋಡಲ್ ಅಧಿಕಾರಿ ಗವಿಸಿದ್ದಯ್ಯ ಬೆಣಕಲ್ಮಠ ಶಿಕ್ಷಕಿಯರಾದ ಸವಿತಾ ಕಲ್ಯಾಣಿ ಗೀತಾ ವಿ ಶ್ವೇತಾ ಮಹಮದ್ ಇಸ್ಮಾಯಿಲ್ ಸವಿತಾ ಬಿ.ಕೆ. ರಾಜಶ್ರೀ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.