ADVERTISEMENT

ಮೂಲಸೌಲಭ್ಯ ವಂಚಿತ ಮಲ್ಲಿಗೆವಾಡ

ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಶುದ್ಧ ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 12:36 IST
Last Updated 28 ಜೂನ್ 2022, 12:36 IST
ನಿರುಪಯುಕ್ತವಾದ ಮಿನಿ ವಾಟರ್ ಟ್ಯಾಂಕ್ 
ನಿರುಪಯುಕ್ತವಾದ ಮಿನಿ ವಾಟರ್ ಟ್ಯಾಂಕ್    

ಕನಕಗಿರಿ: ತಾಲ್ಲೂಕಿನ ಮಲ್ಲಿಗೆವಾಡ ಗ್ರಾಮವು ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ‌

ಗ್ರಾಮದ ಬೀದಿಗಳಲ್ಲಿ ಚರಂಡಿಗಳು ಇಲ್ಲ. ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಗ್ರಾಮದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಳವಾಗಿದೆ. ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಕೊಳಚೆ ನೀರು ಮುಂದೆ ಸಾಗುತ್ತಿಲ್ಲ.

ರಸ್ತೆಯಲ್ಲಿಯೆ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ. ಗ್ರಾಮದಿಂದ ಕನಕಗಿರಿ ವರೆಗಿನ 4 ಕಿಮೀ., ಉದ್ದದ ರಸ್ತೆ ಡಾಂಬರೀಕರಣ ಕಂಡಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತೆಗ್ಗು ದಿನ್ನಿಗಳಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಚಾಲಕರು ಊರು ತಲುಪಲು ಹರಸಾಹಸ ಮಾಡುತ್ತಿದ್ದಾರೆ.

ADVERTISEMENT

ಮಳೆಗಾಲದಲ್ಲಿ ಜನರ ಗೋಳು ಹೇಳ ತೀರದು ಎಂದು ಯುವಕ ರಾಮನಗೌಡ ಅಳಲು ವ್ಯಕ್ತಪಡಿಸಿದರು. ರಸ್ತೆ ಸರಿಯಾಗಿಲ್ಲ. ಬಸ್ ಓಡಾಡಿಸಲು ಸಾರಿಗೆ ಇಲಾಖೆಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದಲ್ಲಿ 3 ಮಿನಿ ವಾಟರ್ ಟ್ಯಾಂಕ್ ಇದ್ದರೂ ಒಂದು ಉಪಯೋಗವಿಲ್ಲವಾಗಿದೆ. ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ನಿರ್ಮಿಸಿದ ನೀರಿನ ಟ್ಯಾಂಕ್‌ಗಳು ಶಿಥಿಲಗೊಂಡಿವೆ.

ಜಾತ್ರೆ ನಡೆಯುವ ಸಮಯದಲ್ಲಿ ಮಾತ್ರ ಬೀದಿ ದೀಪಗಳು ಬೆಳಗುತ್ತವೆ. ಅಧಿಕಾರಿಗಳು ಗ್ರಾಮಕ್ಕೆ ಬರುವುದು ಅಪರೂಪವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

‘ಶಂಕ್ರಪ್ಪ ಅವರ ಮನೆಯಿಂದ ಹಿಡಿದು ಹಳ್ಳಕ್ಕೆ ತೆರಳುವ ರಸ್ತೆ ವರೆಗೆ ಚರಂಡಿ ನಿರ್ಮಾಣ ಮಾಡುವುದು, ಬೀರಪ್ಪ ಮನೆಯಿಂದ ಕಾಟಾಪುರ ರಸ್ತೆವರೆಗೆ ಸಿಮೆಂಟ್ ಕಾಂಕ್ರಿಟ್ ರಸ್ತೆ ಅವಶ್ಯಕತೆ ಇದೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಈ ಕೆಲಸ ಮಾಡಲು ಆಗುವುದಿಲ್ಲ. ಶಾಸಕರು ಈ ಕಡೆಗೆ ಗಮನ ಹರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕುಂಬಾರ ಮನವಿ ಮಾಡಿದರು.

‘ಮಲ್ಲಿಗೆವಾಡದಿಂದ ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನಿತ್ಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್ ಇಲ್ಲವೇ ಕಾಲ್ನಡಿಗೆ ಮೂಲಕ ಹೋಗುತ್ತಿದ್ದಾರೆ. ಸರಿಯಾದ ಬಸ್ ಸೌಲಭ್ಯವೂ ಇಲ್ಲಿಲ್ಲ. ಗ್ರಾಮದಿಂದ ಕನಕಗಿರಿ, ನವಲಿ, ಕಾರಟಗಿ ವರೆಗೆ ಸಂಚರಿಸಲು ಒಂದು ಬಸ್‌ ವ್ಯವಸ್ಥೆ ಇದ್ದು, ಮತ್ತೊಂದು ಬಸ್ ಓಡಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿ ಶರಣಪ್ಪ ತಿಳಿಸಿದರು.

**

ತಾವು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು ಮಲ್ಲಿಗೆವಾಡ ಗ್ರಾಮಕ್ಕೆ ಶೀಘ್ರವೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು
- ಯಂಕೋಬ ಮಲ್ಲಾಪುರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಹಿರೇಖೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.