ADVERTISEMENT

ಹುಲಿಗೆಮ್ಮ ದೇವಿ ದೇವಸ್ಥಾನ | 71 ಜೋಡಿಗಳ ಸಾಮೂಹಿಕ ವಿವಾಹ ಜ.31ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 15:39 IST
Last Updated 29 ಜನವರಿ 2024, 15:39 IST
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಮಾಂಗಲ್ಯ ಭಾಗ್ಯ ಯೋಜನೆಗೆ ಬುಧವಾರ ಸಾಕ್ಷಿ ಆಗಲಿದೆ
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಮಾಂಗಲ್ಯ ಭಾಗ್ಯ ಯೋಜನೆಗೆ ಬುಧವಾರ ಸಾಕ್ಷಿ ಆಗಲಿದೆ   

ಮುನಿರಾಬಾದ್: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸರ್ಕಾರದ ‘ಮಾಂಗಲ್ಯ ಭಾಗ್ಯ ಯೋಜನೆ’ ಅಡಿಯಲ್ಲಿ ಸುಮಾರು 71 ಜೋಡಿಗಳು ಬುಧವಾರ(ಜ.31)ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸರ್ಕಾರದ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಬುಧವಾರ ಮಧ್ಯಾಹ್ನ 12.20ಕ್ಕೆ ಸಲ್ಲುವ ಅಬಿಜಿನ್ ಲಗ್ನ ಶುಭ ಮುಹೂರ್ತದಲ್ಲಿ ಕಾರ್ಯಕ್ರಮ ನಡೆಯಲಿದೆ. ಕೊಪ್ಪಳ ಮತ್ತು ಗದಗ ಜಿಲ್ಲೆ ವ್ಯಾಪ್ತಿಯ ಸುಮಾರು 71 ಜೋಡಿ ವಧು–ವರರು ಹೆಸರು ನೋಂದಾಯಿಸಿದ್ದಾರೆ. ದೇವಸ್ಥಾನ ಆವರಣದಲ್ಲಿ ಮಾಂಗಲ್ಯ ಧಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ದಾಸೋಹ ಭವನದ ಎದುರಿಗೆ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ಜೋಡಿಗೆ ₹ 55 ಸಾವಿರ ವೆಚ್ಚ: ವಧುವಿಗೆ ₹10 ಸಾವಿರ, ವರನಿಗೆ ₹ 5 ಸಾವಿರ ಬಟ್ಟೆ ಮತ್ತು ಅವಶ್ಯ ವಸ್ತುಗಳ ಖರೀದಿಗೆ ನೀಡಲಾಗುವುದು. ₹ 40 ಸಾವಿರ ವೆಚ್ಚದಲ್ಲಿ ಚಿನ್ನದ ತಾಳಿ ನೀಡಲಾಗುವುದು. ಮದುವೆಗೆ ಬರುವ ಸಂಬಂಧಿಕರು ಮತ್ತು ನೆಂಟರಿಗೆ ದೇವಸ್ಥಾನ ದಾಸೋಹ ಭವನದ ಹತ್ತಿರ ಉಪಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ದೂರದ ಗದಗ ಜಿಲ್ಲೆಯಿಂದ ವಿವಾಹದ ಮುನ್ನಾ ದಿನ ಬರುವ ವಧು–ವರರ ಕುಟುಂಬಗಳಿಗೆ ದೇವಸ್ಥಾನದ ವತಿಯಿಂದ ಉಚಿತ ವಸತಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. 20ರಿಂದ 25 ಸಾವಿರ ಜನ ಬರುವ ನಿರೀಕ್ಷೆಯಿದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈ. ವೀರೇಶ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಸಂಗಣ್ಣ ಕರಡಿ ಸೇರಿದಂತೆ ವಿವಿಧ ಗಣ್ಯರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುವರು ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಮಾಂಗಲ್ಯ ಭಾಗ್ಯ ಯೋಜನೆಗೆ ಬುಧವಾರ ಸಾಕ್ಷಿ ಆಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.