ADVERTISEMENT

ನೆರೆ| ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಕುತ್ತು: ಕಟ್ಟಿಗೆ ಒಲೆಯಲ್ಲಿ ಬಿಸಿಯೂಟ ತಯಾರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 13:35 IST
Last Updated 8 ಸೆಪ್ಟೆಂಬರ್ 2019, 13:35 IST
ತಾವರಗೇರಾ ಬಸವಣ್ಣನ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಿಗೆಯಲ್ಲಿ ಬಿಸಿಯೂಟ ತಯಾರಿಸುತ್ತಿರುವುದು
ತಾವರಗೇರಾ ಬಸವಣ್ಣನ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಿಗೆಯಲ್ಲಿ ಬಿಸಿಯೂಟ ತಯಾರಿಸುತ್ತಿರುವುದು   

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ಯಾಸ್‌ ಸರಬರಾಜು ಇಲ್ಲದ ಕಾರಣ ಕಟ್ಟಿಗೆ ಒಲೆಯಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ.

ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಕುಷ್ಟಗಿ ಭಾರತ್ ಗ್ಯಾಸ್ ಏಜನ್ಸಿಯಿಂದ ಸಮರ್ಪಕವಾಗಿ ಸಿಲಿಂಡರ್ ಸರಬರಾಜು ಆಗದ ಕಾರಣ ಸಮಸ್ಯೆಯಾಗಿದೆ.

ನೆರೆ ಹಾವಳಿಯಿಂದ ಗ್ಯಾಸ್ ಏಜನ್ಸಿಗೆ ಮಂಗಳೂರಿನಿಂದ ಸಿಲಿಂಡರ್‌ ಸರಬರಾಜು ಆಗುವಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.

ADVERTISEMENT

ಒಂದು ತಿಂಗಳಿನಿಂದ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆ ಒಲೆ ಬಳಸಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಲಾಗುತ್ತಿದೆ ಎಂದು ಬಸವಣ್ಣನ ಕ್ಯಾಂಪ್ ಶಾಲೆ ಅಡುಗೆ ತಯಾರಕರಾದ ಹನಮವ್ವ, ಲಕ್ಷ್ಮವ್ವ, ಶಾಂತವ್ವ ತಿಳಿಸಿದರು.

ಕೆಲವು ಶಾಲೆಗಳಲ್ಲಿ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆಯಿಂದ ಅಡುಗೆ ತಯಾರಿಸುವುದು ಗಮನಕ್ಕೆ ಇದೆ. ಸಿಲಿಂಡರ್ ಪೂರೈಕೆ ವ್ಯತ್ಯವಾಗಿದ್ದು, ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಕೆ. ಹೇಳಿದರು.

ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಿಗೆ ಕುಷ್ಟಗಿ ದೂರವಾಗುತ್ತಿದ್ದು, ಸಿಲಿಂಡರ್‌ಗೆ 1 ಕಿ.ಮೀ.ಗೆ ₹1.60 ಹೆಚ್ಚುವರಿ ನೀಡಬೇಕು. ತಾವರಗೇರಾ ಗ್ಯಾಸ್ ಏಜೆನ್ಸಿಗೆ ವರ್ಗಾವಣೆ ಮಾಡಿದರೆ ಸೂಕ್ತ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.