
ಕೊಪ್ಪಳ: ಕಡಿಮೆ ಖರ್ಚು, ಕಡಿಮೆ ನಿರ್ವಹಣೆ ಹಾಗೂ ಹೆಚ್ಚು ಆದಾಯ ಎನ್ನುವ ಸೂತ್ರಕ್ಕೆ ಅನುಗುಣವಾಗಿ ಜಿಲ್ಲೆಯ ಯುವ ಕೃಷಿಕರು ಅಣಬೆ ಬೇಸಾಯ ಮಾಡುತ್ತಿದ್ದು ಅದು ಅವರನ್ನು ಅಲ್ಪ ಆದಾಯ ಗಳಿಸುವ ಕೃಷಿಕನಿಂದ ಉದ್ಯಮಿಯನ್ನಾಗಿಸುವ ಮಾರ್ಗದಲ್ಲಿ ಕೊಂಡೊಯ್ಯತ್ತಿದೆ.
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ಹೆಚ್ಚು ಅಣಬೆ ಬೇಸಾಯವಿದ್ದು, ಹೆಚ್ಚು ಬಿಸಿಲಿನ ಪ್ರದೇಶವಾದ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿಯೂ ಈಗ ಈ ಕೃಷಿ ಚಿಗುರೊಡೆಯುತ್ತಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ಬರುತ್ತಿರುವ ಕಾರಣ ಯುವಕೃಷಿಕರಿಗೆ ಅಣಬೆ ಬೇಸಾಯ ಆಕರ್ಷಿಸುತ್ತಿದೆ.
ತೋಟಗಾರಿಕಾ ಇಲಾಖೆ ಹಣ್ಣುಗಳ ಮೇಳ ಹಮ್ಮಿಕೊಂಡಿದ್ದು, ಈ ಬಾರಿ ಹಣ್ಣುಗಳ ಜೊತೆ ಅಣಬೆ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೂ ಒತ್ತು ಕೊಟ್ಟಿತ್ತು. ಇಲಾಖೆ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಒಂದು ಸಾವಿರ ರೈತರು ಅಣಬೆ ಬೇಸಾಯದ ತರಬೇತಿ ಪಡೆದುಕೊಂಡಿದ್ದು, ಅದರಲ್ಲಿ ಕನಿಷ್ಠ 100 ಜನ ಪ್ರಾಯೋಗಿಕವಾಗಿ ಅಣಬೆ ಕೃಷಿ ಮಾಡಿ ಆದಾಯವನ್ನೂ ಗಳಿಸಿಕೊಳ್ಳುತ್ತಿದ್ದಾರೆ.
ಪದವಿ ಪೂರ್ಣಗೊಳಿಸಿರುವ 25 ವರ್ಷದ ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದ ಭೀಮಪ್ಪ, 23 ವರ್ಷದ ಬಸವರಾಜ ಕೊರವರ ಹಾಗೂ ಭೀಮಪ್ಪ ಸಹೋದರಿ 21 ವರ್ಷದ ಹುಲಿಗೆಮ್ಮ ಸೇರಿಕೊಂಡು ಅಣಬೆ ಕೃಷಿ ಮಾಡುತ್ತಿದ್ದಾರೆ. ಮೊದಲು ತಮ್ಮ ಮನೆಯ ಬಳಿಯಿದ್ದ ಸಣ್ಣ ಜಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಕೃಷಿ ಈಗ ಅರ್ಧ ಎಕರೆ ಹೊಲದಲ್ಲಿ ಮಾಡುವಷ್ಟಾಗಿದೆ. ರಾಜ್ಯದ ವಿವಿಧೆಡೆ ನಡೆಯುವ ಮೇಳಗಳು ಹಾಗೂ ಉತ್ಸವಗಳಲ್ಲಿ ಅಣಬೆ ಮಾರಾಟ ಮಾಡುತ್ತಿದ್ದಾರೆ. ವ್ಯಾಟ್ಸ್ ಆ್ಯಪ್ ಗ್ರೂಪ್ ರಚಿಸಿಕೊಂಡು ಅದರಲ್ಲಿಯೇ ಮುಂಗಡ ಆರ್ಡರ್ ಪಡೆಯುತ್ತಿದ್ದಾರೆ. ಇದರಿಂದಾಗಿ ಈ ಯುವಪಡೆಗೆ ಮಾರುಕಟ್ಟೆ ಸಮಸ್ಯೆಯಾಗಿಲ್ಲ. ಮನೆ ಬಾಗಿಲಿಗೂ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ಚಿಪ್ಪು ಅಣಬೆಗೆ ಒಂದು ಕೆ.ಜಿ.ಗೆ ₹300 ಇದ್ದು, ಹಾಲು ಅಣಬೆ ₹400 ಬೆಲೆ ಹೊಂದಿದೆ. ಚಿಪ್ಪು ಅಣಬೆಯಲ್ಲಿ ಬಿಳಿ, ಹಳದಿ, ಗುಲಾಬಿ, ನೀಲಿ, ಬೂದು ಬಣ್ಣದ ತಳಿಗಳನ್ನು ಬೆಳೆಯಬಹುದಾದರೂ ಭೀಮಪ್ಪ ಸದ್ಯಕ್ಕೆ ಬೂದು ಬಣ್ಣದ ಅಣಬೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ತರಹೇವಾರಿ ಅಣಬೆಗಳನ್ನು ಬೆಳೆಯುವ ಪ್ರಯೋಗವನ್ನೂ ಮಾಡುತ್ತಿದ್ದಾರೆ.
‘ಮೇಳಗಳು ಇರುವ ಮೊದಲೇ ಸಾಕಷ್ಟು ಪ್ರಮಾಣದಲ್ಲಿ ಅಣಬೆ ಬೆಳೆಯುತ್ತೇವೆ. ಆಗ ದಿನಕ್ಕೆ ಹತ್ತು ಸಾವಿರ ಕೆ.ಜಿ.ಮಾರಾಟ ಮಾಡುತ್ತೇವೆ. ಇದರಿಂದ ತಿಂಗಳಿಗೆ ಕನಿಷ್ಠ ₹90 ಸಾವಿರ ಆದಾಯ ಗಳಿಸಬಹುದು. ವರ್ಷಪೂರ್ತಿ ಇದೇ ರೀತಿ ಮಾರುಕಟ್ಟೆ ಗಳಿಸಿದರೆ ಆದಾಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ’ ಎಂದು ಭೀಮಪ್ಪ ತಿಳಿಸಿದರು.
ಈ ಯುವಪಡೆ ತಾವು ಬೆಳೆಯುವ ಜೊತೆಗೆ ಬೆಳೆಯುವ ವಿಧಾನ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿಯನ್ನೂ ನೀಡುತ್ತಿದೆ. ಕಾರಟಗಿ, ಗಂಗಾವತಿ, ಕುಷ್ಟಗಿ, ಗಂಗಾವತಿ, ಕನಕಗಿರಿ ಹಾಗೂ ಕೊಪ್ಪಳ ಭಾಗದಲ್ಲಿ ಈ ಕೃಷಿ ಮಾಡುವ ರೈತರು ಇದ್ದಾರೆ.
ಅಣಬೆ ಬೇಸಾಯದ ಕುರಿತು ಜಿಲ್ಲೆಯಲ್ಲಿ ಒಂದು ಸಾವಿರ ರೈತರು ತರಬೇತಿ ಪಡೆದಿದ್ದಾರೆ. ಅವರಿಗೆ ಪ್ರೋತ್ಸಾಹಿಸಲು ಈ ಬಾರಿಯ ಮೇಳದಲ್ಲಿ ಅಣಬೆ ಮಾರಾಟ ಹಾಗೂ ಜನರಿಗೆ ಅದರ ರುಚಿ ತೋರಿಸಲು ಒತ್ತು ಕೊಡಲಾಗಿತ್ತು.ಕೃಷ್ಣ ಸಿ. ಉಕ್ಕುಂದ ಜಂಟಿ ನಿರ್ದೇಶನ ತೋಟಗಾರಿಕಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.