ADVERTISEMENT

ಅಕ್ಷತೆ ನೀಡಿದರೆ ಹೊಟ್ಟೆ ತುಂಬಲ್ಲ: BJP ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 16:12 IST
Last Updated 13 ಜನವರಿ 2024, 16:12 IST
ಕಾರಟಗಿ ಸಮೀಪದ ಮಾರಿಕ್ಯಾಂಪ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಕಾರಟಗಿ ಸಮೀಪದ ಮಾರಿಕ್ಯಾಂಪ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು   

ಕಾರಟಗಿ (ಕೊಪ್ಪಳ): ಬಿಜೆಪಿ ಶ್ರೀರಾಮನ ಹೆಸರಲ್ಲಿ ಧರ್ಮ ರಾಜಕಾರಣ ಮಾಡುತ್ತಾ ಅಕ್ಷತೆ ನೀಡುವುದನ್ನೇ ಬಹುದೊಡ್ಡ ಕಾರ್ಯಕ್ರಮವನ್ನಾಗಿ ಮಾಡುತ್ತಿದೆ. ಹಸಿದವರಿಗೆ ಅಕ್ಷತೆಯಲ್ಲ, ಅಕ್ಕಿ ನೀಡಿದರೆ ಮಾತ್ರ ಹೊಟ್ಟೆ ತುಂಬಲಿದೆ. ಕನಿಷ್ಠ ವಾಸ್ತವಾಂಶವನ್ನು ಮರೆಮಾಚಿ ಬಿಜೆಪಿ ಧರ್ಮ ರಾಜಕಾರಣಕ್ಕಿಳಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ತಾಲ್ಲೂಕಿನ ಹುಳ್ಕಿಹಾಳಕ್ಯಾಂಪ್ (ಮಾರಿಕ್ಯಾಂಪ್)ನಲ್ಲಿ ಶನಿವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಭಾವನೆಯ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಕನಸು ಬಿಜೆಪಿಯವರದ್ದಾಗಿದೆ. ಜನರಿಗೆ ಸತ್ಯದ ಅರಿವಿದೆ. ಮಂತ್ರಾಕ್ಷತೆ ವಿತರಣೆ ನೆಪದಲ್ಲಿ ಬಿಜೆಪಿಗರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸತ್ಯವಾಗಿದೆ. ಧರ್ಮದ ಹೆಸರಿನಲ್ಲಿ ಜನರ ಮನಸ್ಸು ಪರಿವರ್ತಿಸುವ ಕಾರ್ಯ ಬಹಳ ದಿನ ನಡೆಯದು ಎಂದು ಹೇಳಿದರು.

ADVERTISEMENT

ಹಸಿದವರಿಗೆ ಅನ್ನ ನೀಡಿದರೆ ಸಾರ್ಥಕ. ಇದನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ.  ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಬಡವರಿಗೆ ಭೂಮಿ, ಮನೆ ಕೊಟ್ಟು, ಊಳುವವನೇ ಭೂ ಒಡೆಯ ಕಾನೂನು ಜಾರಿ ಮಾಡಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿ ಬಡ ಜನರ ಧ್ವನಿಯಾಗಿ, ಜನಪರ ಕಾರ್ಯಗಳನ್ನು ಜಾರಿಗೊಳಿಸಿದ್ದರು. ಆದರೆ ಈಗಿನ ಪ್ರಧಾನಿ ಮೋದಿ ಏನಿದ್ದರೂ ಅಂಬಾನಿ, ಅದಾನಿಯಂತಹ ಕಾರ್ಪೋರೇಟ್‌ ವಲಯದ ಹಿತರಕ್ಷಣೆಗೆ ಮೀಸಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ನೀಡಿದ್ದೇನೆ. ಶ್ರೀರಾಮನ ಮೇಲೆ ನಮಗೂ ಭಕ್ತಿ ಇದೆ. ಅಕ್ಷತೆ ವಿತರಣೆ ನಾಟಕ ಆಡುವುದನ್ನು ಬಿಜೆಪಿ ನಿಲ್ಲಿಸಲಿ ಎಂದು ಹೇಳಿದರು.

ಬರುವ ಲೋಕಸಭಾ ಚುನಾವಣೆ ಎದುರಿಸಲು ಎಲ್ಲಾ ಸಚಿವರಿಗೆ ಹೈಕಮಾಂಡ್ ಜವಬ್ದಾರಿ ವಹಿಸಿದೆ. ಕೊಪ್ಪಳ ಕ್ಷೇತ್ರದಲ್ಲಿ ಗೆಲುವು ಕಾಂಗ್ರೆಸ್‌ನದ್ದಾಗುವುದು ಖಚಿತ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸಚಿವರು ಇದೇ ಸಂದರ್ಭದಲ್ಲಿ ₹ 18 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಾಘವೇಂದ್ರಕ್ಯಾಂಪ್‌ನ ಅಂಗನವಾಡಿ ಕೇಂದ್ರದ ನೂತನ ಕಟ್ಟಡ, ₹15 ಲಕ್ಷ ವೆಚ್ಚದ 5ನೇ ವಾರ್ಡ್‌ನ ಅಂಗನವಾಡಿ ಕಟ್ಟಡ, ಹುಳ್ಕಿಹಾಳಕ್ಯಾಂಪ್‌ನಲ್ಲಿ ಶ್ರೀರಾಮ ದೇವಸ್ಥಾನದಿಂದ ರುದ್ರಭೂಮಿಯವರೆಗೆ ₹2.10 ಕೋಟಿ ವೆಚ್ಚದ 12 ಕಿ. ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ, ದುಂಡಗಿ ಗ್ರಾಮದಲ್ಲಿ ಎಸ್ಟಿ ಕಾಲೊನಿಯಲ್ಲಿ ₹70 ವೆಚ್ಚದ ಸಿಸಿ ರಸ್ತೆಗೆ ಭೂಮಿಪೂಜೆ, ಚಳ್ಳೂರಕ್ಯಾಂಪ್‌ನಲ್ಲಿ ₹45 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ನಾಗನಕಲ್ ಗ್ರಾಮದ ಎಸ್ಟಿ ಕಾಲೋನಿಯಲ್ಲಿ ₹ 35 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಪುರಸಭೆ ಸದಸ್ಯರಾದ ಶ್ರೀನಿವಾಸ ಕಾನುಮಲ್ಲಿ, ಮೌನಿಕಾ ಧನಂಜಯ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಪ್ರಮುಖರಾದ ಚನ್ನಬಸಪ್ಪ ಸುಂಕದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಉದ್ಯಮಿ ಕೆ.ಸಿದ್ದನಗೌಡ, ಗಿರಿಯಪ್ಪ ಬೂದಿ, ಚಿದಾನಂದಪ್ಪ ಈಡಿಗೇರ, ಸಿ.ಗದ್ದೆಪ್ಪ ನಾಯಕ, ಸೋಮನಾಥ ದೊಡ್ಡಮನಿ, ನೆಕ್ಕಂಟಿ ಬಸವೇಶ್ವರರಾವ್ ಬಸವಣ್ಣಕ್ಯಾಂಪ, ದೇವಪ್ಪ ನರೇರ್, ಶ್ರೀನಿವಾಸ ಹುಳ್ಕಿಹಾಳಕ್ಯಾಂಪ್, ಶಿವಯ್ಯ ಚಳ್ಳೂರುಕ್ಯಾಂಪ್, ಪ್ರಶಾಂತ ನಾಯಕ, ಸತ್ಯನಾರಾಯಣ ಕೋಟಯ್ಯಕ್ಯಾಂಪ್, ಗುತ್ತಿಗೆದಾರ ಜಿ.ರಾಮ್‌ಮೋಹನ್, ದೌವಲ್‌ಸಾಬ, ಶರಣಪ್ಪ ಕರಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.