ADVERTISEMENT

ಹಡಪದ ಸಮುದಾಯಕ್ಕೆ ಶಾಸಕ ಬಯ್ಯಾಪುರ ಭರವಸೆ

ಹಡಪದ ಸಮುದಾಯಕ್ಕೆ ಶಾಸಕ ಬಯ್ಯಾಪುರ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 12:25 IST
Last Updated 26 ಏಪ್ರಿಲ್ 2021, 12:25 IST
ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹಡಪದ ಸಮುದಾಯ ಭವನ ನಾಮಫಲಕ ಅನಾವರಣಗೊಳಿಸಿದರು
ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹಡಪದ ಸಮುದಾಯ ಭವನ ನಾಮಫಲಕ ಅನಾವರಣಗೊಳಿಸಿದರು   

ಕುಷ್ಟಗಿ: ‘ಹಡಪದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದಲ್ಲಿ ₹10 ಲಕ್ಷ ನೆರವು ಒದಗಿಸುವುದಾಗಿ’ ಶಾಸಕ ಅಮರೇಗೌಡ ಬಯ್ಯಾಪುರ ತಿಳಿಸಿದರು.

ದೊಡ್ಡಬಸವೇಶ್ವರ ನಗರದಲ್ಲಿ ಹಡಪದ ಸಮುದಾಯದ ಸಮುದಾಯ ಭವನದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ₹1.35 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜೂನ್ ವೇಳೆಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಶಾಸಕರ ಅನುದಾನದಲ್ಲಿ ಸಮುದಾಯ ಭವನಕ್ಕೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಉತ್ತಮ ಕಟ್ಟಡ ನಿರ್ಮಾಣವಾಗಬೇಕಾದರೆ ಹೆಚ್ಚಿನ ಹಣ ಬೇಕಾಗುತ್ತದೆ. ಕೇವಲ ಸರ್ಕಾರದ ಅನುದಾನ ಸಾಲುವುದಿಲ್ಲ. ಹಾಗಾಗಿ ಹಡಪದ ಸಮುದಾಯದಲ್ಲಿರುವ ಉಳ್ಳವರೂ ಇದಕ್ಕೆ ಆರ್ಥಿಕ ನೆರವು ನೀಡುವ ಮನಸ್ಸು ಮಾಡಬೇಕು ಎಂದು ಹೇಳಿದರು.

ADVERTISEMENT

ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಅನೇಕ ಸಮುದಾಯ ಭವನಗಳು ಸದ್ಬಳಕೆಗಿಂತ ದುರ್ಬಳಕೆಯಾಗುವುದೇ ಹೆಚ್ಚು. ಇದರಿಂದ ಸರ್ಕಾರದ ಆಶಯ ಈಡೇರುವುದಿಲ್ಲ. ಲಕ್ಷಾಂತರ ಹಣ ವ್ಯರ್ಥವಾಗುತ್ತದೆ. ಈ ವಿಷಯದಲ್ಲಿ ಯಾವುದೇ ಸಮುದಾಯ ಇರಲಿ, ತಮ್ಮ ಸಮುದಾಯಭವನಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಮಾತನಾಡಿ ಹಡಪದ ಸಮಾಜದ ಸಮುದಾಯ ಭವನಕ್ಕೆ ಪುರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿಯೂ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದರು.

ಹಡಪದ ಸಮುದಾಯದ ಮುಖಂಡ ಬಸವರಾಜ ಬಂಡರಗಲ್ ಇತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಾಸಕ ಬಯ್ಯಾಪುರ ಮತ್ತು ಪುರಸಭೆ ಅಧ್ಯಕ್ಷ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ಪುರಸಭೆ ಸದಸ್ಯರಾದ ಬಸವರಾಜ ಬುಡಕುಂಟಿ, ಮಹಾಂತೇಶ, ಹಡಪದ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹನುಮಸಾಗರ, ಪ್ರಮುಖರಾದ ಎಚ್.ಶಿವಪುತ್ರಪ್ಪ, ದೊಡ್ಡಪ್ಪ ಹೊಸೂರು, ರುದ್ರಪ್ಪ ಹಡಪದ, ಶಿವಪ್ಪ ಇಟ್ಟಂಗಿ, ಎಂಜಿನಿಯರ್ ಆದೇಶ, ನೀಲಪ್ಪ ಮಾರನಾಳ, ಮಲ್ಲಪ್ಪ ಗಡಾದ, ನೀಲಕಂಠಬಾಬು ನಿಲೋಗಲ್, ಶರಣಪ್ಪ ಆಡೂರು, ಮಲ್ಲಪ್ಪ ಬಿನ್ನಾಳ, ಮುಖೇಶ ನಿಲೋಗಲ್ ಇತರರು ಇದ್ದರು. ಎಚ್.ಮಹೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.