
ಕುಕನೂರು: ‘ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಮುಖ್ಯಾಧಿಕಾರಿ ಸಾಮಾನ್ಯ ಸಭೆ ಕರೆಯಲಿಲ್ಲಾ. ಮನ ಬಂದಂತೆ ನೀವು ಅಧಿಕಾರ ಮಾಡುತ್ತಿದ್ದೀರಿ. ವಿದ್ಯುತ್ ಬೆಳಕಿನಲ್ಲಿ ಹಣ ಕೊಳ್ಳೆಹೊಡೆಯಲಾಗಿದೆ’ ಎಂದು ಸದಸ್ಯ ಸಿದ್ದು ಉಳ್ಳಾಗಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಮಂಗಳವಾರ ಕರೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಮಾತನಾಡಿದರು.
ಈ ಹಿಂದಿನ ಸಭೆಯಲ್ಲಿ ನವೋದಯ ಶಾಲೆಗೆ ಕುರಿತು ಚರ್ಚಿಸಲಾಗಿತ್ತು. ಆದರೆ ಈವರೆಗೆ ನವೋದಯ ಶಾಲೆಗೆ ಯಾವುದೇ ರೀತಿ ಪಂಚಾಯಿತಿ ಅನುದಾನ ಒದಗಿಸಿರುವುದಿಲ್ಲ. ಸಭೆಯಲ್ಲಿಯೂ ಒಪ್ಪಿಗೆ ಸೂಚಿಸಿರುವುದಿಲ್ಲ. ಆದರೆ ನೀವು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬರೆದುಕೊಂಡಿದ್ದೀರಿ. ಎಲ್ಲಾ ವಾರ್ಡಗಳಲ್ಲಿ ವಿದ್ಯುತ್ ಅಳವಡಿಕೆ ಮಾಡಲಾಗಿದೆ ಎಂದು ಬೋಗಸ್ ಬಿಲ್ ಮಾಡಿ ಬೆಳಕಿನಲ್ಲಿ ಹಣ ಕೊಳ್ಳೆಹೊಡೆಯಲಾಗಿದೆ ಎಂದು ಆರೋಪಿಸಿದರು.
‘ಪಟ್ಟಣದ ಸರ್ಕಾರಿ ಶಾಲೆಗಳ ಶೌಚಾಲಯ, ಮೈದಾನ ಸ್ವಚ್ಚತೆ ಸೇರಿದಂತೆ ವಿವಿಧ ಅಂಗನವಾಡಿ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಮೊದಲು ಅವುಗಳ ಕಡೆಗೆ ಗಮನ ನೀಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಗಗನ ನೋಟಗಾರ ಮಾತನಾಡಿ, ‘ಕೋಳಿಪೇಟೆ ದುರ್ಗಮ್ಮನಗುಡಿ ಪೈಪ್‌ಲೈನ್ ಕಾಮಗಾರಿ ಕುರಿತು ಚರ್ಚಿಸಿದರು. ನಂತರ ಕ್ರಮ ಸಂಖ್ಯೆ 21-22ರಲ್ಲಿ ಬೀದಿದೀಪ ಇತರೇ ಸಾಮಗ್ರಿಗಳ ಖರೀದಿಗೆ ₹46,834 ಹಾಗೂ ₹43,285 ಬಿಲ್ ಸದಸ್ಯರ ಗಮನಕ್ಕೆ ಬಾರದಂತೆ ಬಿಲ್ ಪಾವತಿಸಿದ್ದೀರಿ ಎಂದು ತರಾಟೆ ತೆಗೆದುಕೊಂಡರು.
ಬೋಗಸ್ ಬಿಲ್ ಕ್ರಮಕ್ಕೆ ಆಗ್ರಹ: ಪ.ಪಂ ಸದಸ್ಯ ಸಿರಾಜ್ ಕರಮುಡಿ ಮಾತನಾಡಿ, ವಿವಿಧ ವಾರ್ಡಗಳಲ್ಲಿ ಬೀದಿ ದೀಪ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಖರ್ಚು ಹಾಕಲಾಗಿದೆ. 19 ವಾರ್ಡ್ ಗಳಲ್ಲಿ ವಿದ್ಯುತ್ ಅಳವಡಿಸಲಾಗಿದೆ ಎಂದು ಬಿಲ್ ಮಾಡಿದ್ದಾರೆ. ಆದರೆ ನನ್ನ 10ನೇ ವಾರ್ಡಿನಲ್ಲಿ ವಿದ್ಯುತ್ ಅಳವಡಿಕೆ ಮಾಡಿಲ್ಲ, ಈ ರೀತಿ ಬೋಗಸ್ ಬಿಲ್ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ರಾಮಣ್ಣ ಬಂಕದಮನಿ, ಬಾಲರಾಜ್ ಗಾಳಿ, ಜಗನ್ನಾಥ್ ಭೋವಿ, ಮಂಜುನಾಥ ಕೋಳೂರ, ಮಲ್ಲು ಚೌದ್ರಿ, ರಾಧಾ ದೊಡ್ಮನಿ, ನೇತ್ರಾವತಿ ಮುಧೋಳ, ಮಂಜುಳಾ ಕಲ್ಮನಿ, ನೇತ್ರಾವತಿ ಮಾಲಗಿತ್ತಿ, ಲಕ್ಷ್ಮಿ ಸಬರದ, ಕವಿತಾ ಹೂಗಾರ, ವೀರಣ್ಣ ಯಲಬುರ್ಗಿ, ಶರಣಯ್ಯ ಶಶಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.