ಮುನಿರಾಬಾದ್: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆಯುತ್ತಿರುವ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಯ ಪರಿಣಾಮ ನಿತ್ಯ ಹಗಲು, ರಾತ್ರಿ ಎನ್ನದೆ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸ್ಥಳೀಯ ಅಥವಾ ಸಂಚಾರ ಪೊಲೀಸರ ನಿರ್ಲಕ್ಷದಿಂದ ಎಲ್ಲರೂ ಪರದಾಡುವಂತಾಗಿದೆ.
ಹೊಸಪೇಟೆ ಮತ್ತು ಹಿಟ್ನಾಳ ಟೋಲ್‌ಗೇಟ್ ಮಧ್ಯದ ಹುಲಿಗಿ ಕ್ರಾಸ್‌ನಲ್ಲಿ ಹಾಗೂ ಹೊಸಹಳ್ಳಿ ಗ್ರಾಮದ ಬಳಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ದ್ವಿಮುಖ ಸಂಚಾರ ವ್ಯವಸ್ಥೆಯಾಗಿದೆ.
ದ್ವಿಪಥ ರಸ್ತೆಗಳಾದ ಸರ್ವಿಸ್ ರಸ್ತೆಯಲ್ಲಿ, ಹೆದ್ದಾರಿಯಲ್ಲಿ ವಾಹನಗಳು ಸಾಗುವುದರಿಂದ ಸಹಜವಾಗಿ ಸಂಚಾರ ನಿಧಾನವಾಗುತ್ತದೆ.
ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಎರಡು ಲೈನ್‌ಗಳಲ್ಲಿ ವಾಹನಗಳು ಸಾಗುವ ಸಮಯದಲ್ಲಿ ಎದುರಿನಿಂದ ಯಾವುದಾದರೂ ವಾಹನ ಬಂದರೆ ಸಂಚಾರ ನಿಧಾನ ಅಥವಾ ಸ್ತಬ್ಧವಾಗುತ್ತದೆ. ಕಾರಣ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳು, ಕಾರು, ಲಘು ವಾಹನ, ವಿದ್ಯಾರ್ಥಿಗಳ ಶಾಲಾ ಬಸ್, ಆಂಬುಲೆನ್ಸ್, ಕೈಗಾರಿಕೆಗೆ ಕಬ್ಬಿಣದ ಅದಿರು ಮತ್ತು ಕಚ್ಚಾ ವಸ್ತು, ಕಾರ್ಖಾನೆಯಿಂದ ಸಿದ್ಧ ವಸ್ತು ಸಾಗಿಸುವ, ಕಾರ್ಮಿಕರನ್ನು ಕರೆದುಕೊಂಡು ಹೋಗುವ ವಾಹನಗಳು ಹೆದ್ದಾರಿಯಲ್ಲಿ ನಿಲ್ಲುತ್ತವೆ.
ಸಂಚಾರ ನಿರ್ವಹಣೆ ಇರದ ಕಾರಣ ಸಣ್ಣಪುಟ್ಟ ಜಗಳ, ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಕಾರ್ಖಾನೆಗಳಿಗೆ ತಲುಪುವ ಕಾರ್ಮಿಕರು 1 ರಿಂದ 2 ಗಂಟೆ ತಡವಾಗಿ ತಲುಪಿದ ನಿದರ್ಶನ ಕೂಡ ಇದೆ.
ಹೆದ್ದಾರಿ ವಾಹನಗಳ ಸಂಚಾರ ತಿರುಗಿಸಿದ (ಟ್ರಾಫಿಕ್ ಡೈವರ್ಟ್) ಸಂದರ್ಭದಲ್ಲಿ ವಾಹನಗಳು ನಿಧಾನವಾಗಿ ಶಿಸ್ತು ಬದ್ಧವಾಗಿ ಸಾಗಬೇಕು.
ಬೇಗ ಹೋಗಬೇಕು ಎಂಬ ಧಾವಂತದಲ್ಲಿ ಸಾಗುವ ವಾಹನಗಳ ಕಾರಣ ಅಪಘಾತ ಸಾಮಾನ್ಯ. ವಾಹನಗಳ ಮಧ್ಯೆ ನುಸುಳುವ ಬೈಕ್ ಸವಾರರು ಕೆಲವು ಕಡೆ ಸಮಸ್ಯೆಯಾಗುತ್ತಾರೆ.
ಸಾರ್ವಜನಿಕರ ನಿದ್ದೆಗೆಡಿಸಿದ ವಾಹನಗಳ ಶಬ್ದ: ‘ಸಂಚಾರದಟ್ಟಣೆಯಲ್ಲಿ ಸಿಲುಕುವ ವಾಹನಗಳು ವಿಚಿತ್ರ ರೀತಿಯಲ್ಲಿ ಹಾರ್ನ್ ಹಾಕುವುದರ ಕಾರಣ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ರಾತ್ರಿ ನಿದ್ರೆಯ ಸಮಯದಲ್ಲಿ ಕೂಡ ಕಿರಿಕಿರಿಯಾಗುತ್ತಿದೆ’ ಎನ್ನುತ್ತಾರೆ ಹೊಸಲಿಂಗಾಪುರ ಗ್ರಾಮದ ವಸಂತ ನಾಯಕ್.
ಸಂಸದರಿಗೆ ತಟ್ಟಿದ ಬಿಸಿ: ಈಚೆಗೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರು ಬೇರೆಯವರ ಬೈಕ್ ಮೇಲೆ ಮನೆ ಸೇರಿದ ಘಟನೆಯೂ ನಡೆದಿದೆ. ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಿಂದ ಹೊಸ ಲಿಂಗಾಪುರ ಮತ್ತು ಹೊಸಹಳ್ಳಿ ಗ್ರಾಮದಲ್ಲಿ ಸರ್ವಿಸ್ ರಸ್ತೆ ಮತ್ತು ಒಳ ರಸ್ತೆಗಳಲ್ಲಿ ನುಗ್ಗುವ ಲಘು ವಾಹನಗಳು, ಟಿಪ್ಪರ್‌ಗಳ ಸಂಚಾರ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಸರ್ವಿಸ್ ರಸ್ತೆಯಲ್ಲಿ ಅನಾವಶ್ಯಕವಾಗಿ ಅಥವಾ ದುರಸ್ತಿಯ ಕಾರಣ ನಿಲ್ಲುವ ವಾಹನಗಳ ನಿಯಂತ್ರಣ ಅವಶ್ಯಕತೆ ಇದೆ.
‘ಸಂಚಾರ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಅಥವಾ ಕಾಮಗಾರಿ ನಡೆಸುವ ಸಂಸ್ಥೆಯ ಸಿಬ್ಬಂದಿ ಸಂಚಾರ ನಿರ್ವಹಣೆ ಮಾಡಿದರೆ ಸೂಕ್ತ’ ಎಂದು ಹಿಟ್ನಾಳ ಗ್ರಾಮದ ಬಸವರಾಜ ದೇಸಾಯಿ ಮತ್ತು ಕೊಟ್ರೇಶ ಸಜ್ಜನ್ ಸಲಹೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.