
ಯಲಬುರ್ಗಾ: ತಾಲ್ಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಗಜೇಂದ್ರಗಡದ ಪುನೀತ್ ಮೆಲೋಡಿಸ್ ಪಲ್ಲವಿ ಗಾನ ಬಜಾನ್ ಆರ್ಕೆಸ್ಟ್ರಾದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಕೃಷಿ ಪಂಡಿತ ಪ್ರಶಸ್ತಿ ಪಡೆದ ಯಮನಪ್ಪ ಹನಮಪ್ಪ ಗದ್ದಿ ಮಾತನಾಡಿ, ‘ಸಂಗೀತ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುತ್ತದೆ. ಈಚೆಗೆ ಸಂಗೀತಕ್ಕೆ ಉತ್ತಮ ಬೆಂಬಲ ದೊರೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಸಂಗೀತ ಕಾರ್ಯಕ್ರಮಕ್ಕೆ ಆದ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಹಾಗೆಯೇ ಮಕ್ಕಳ ಬಗ್ಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಇಂತಹ ಉತ್ಸವದಲ್ಲಿ ಸಂಗೀತ ಆಯೋಜಿಸುವದರಿಂದ ಮೂಲ ಉದ್ದೇಶ ಈಡೇರುತ್ತದೆ’ ಎಂದರು.
ಗಾನ ಬಜಾನ ತಂಡದ ನಾಯಕಿ ಪಲ್ಲವಿ ಮಾತನಾಡಿ, ‘ಜಾತ್ರೆಯಲ್ಲಿ ಜರುಗಲಿರುವ ಸಾಮೂಹಿಕ ವಿವಾಹ ಅಥವಾ ಮನೆಯಲ್ಲಿಯೇ ಗೌಪ್ಯವಾಗಿ ಬಾಲ್ಯವಿವಾಹ ನಡೆಯುತ್ತಿದ್ದರೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ, ಗ್ರಾಮ ಪಂಚಾಯತಿಗೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದರು.
ರಮೇಶ ಚಿಣಗಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಕೃಷಿ ಪ್ರಶಸ್ತಿ ಪಡೆದ ರೈತರಿಗೆ ಸನ್ಮಾನಿಸಲಾಯಿತು. ನಂತರ ರೈತರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಗಾನ ಬಜಾನ ಕಲಾ ತಂಡದವರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು.
ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ನಿರುಪಾದಿ ಗ್ಯಾನಪ್ಪ ಮಂಗಳೂರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಬಸಪ್ಪ ತಳವಾರ, ಮಾಜಿ ಸದಸ್ಯರಾದ ಕುಂಟೆಪ್ಪ ಚಿಣಗಿ, ಮಹಾಲಿಂಗಪ್ಪ ಗುಡ್ಡದೂರು, ನಿಂಗಪ್ಪ ತಳವಾರ, ಬಾಲಪ್ಪ ಮ್ಯಾದನೇರಿ, ಬಾಲಪ್ಪ ಕುರಿ, ಹನುಮಪ್ಪ ಆಳೂರು, ಹನುಮಪ್ಪ ಪೂಜಾರಿ, ಕುಂಟೆಪ್ಪ ಗದ್ದಿ, ಹನುಮಪ್ಪ ಶೆಟ್ಟಿ, ಆಯೋಜಕ ರವಿ ಆಳೂರು, ಆನಂದ ಭಜಂತ್ರಿ, ಅಮಿತ ಬಡಿಗೇರ, ಮಾರುತಿ ಪುಟಗಮರಿ, ಮಹೇಶ ಚಿಣಗಿ, ಮತ್ತು ಗೆಳೆಯರ ಬಳಗ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.