ADVERTISEMENT

ಇಳಿ ವಯಸ್ಸಿನ ಲಕ್ಷ್ಮವ್ವ ಬದುಕಿಗೆ ನರೇಗಾ ಆಸರೆ

75 ರ ವಯಸ್ಸು, ಕುಗ್ಗದ ದುಡಿಯುವ ಹುಮ್ಮಸ್ಸು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 12:31 IST
Last Updated 20 ಏಪ್ರಿಲ್ 2022, 12:31 IST
ಲಕ್ಷ್ಮವ್ವ
ಲಕ್ಷ್ಮವ್ವ   

ಕೊಪ್ಪಳ:ಇಳಿ ವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಮಗ ದೂರಾದಾಗ, ಅಸಹಾಯಕ ಸ್ಥಿತಿಯಲ್ಲಿದ್ದ ತಾಯಿಗೆ ಮಗಳು ನೆರಳು ನೀಡಿದರೆ, ಹಸಿದ ಹೊಟ್ಟೆಗೆ ಅನ್ನ ನೀಡಿದ್ದು, ನರೇಗಾ ಯೋಜನೆ.

ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ನಿವಾಸಿಯಾಗಿರುವ 75 ವರ್ಷದ ವೃದ್ಧೆ ಲಕ್ಷ್ಮವ್ವ ಕಳೆದ ಎರಡು ವರ್ಷಗಳಿಂದ ನರೇಗಾದಡಿ ಕೆಲಸ ಮಾಡುವ ಮೂಲಕ ಗ್ರಾಮದಲ್ಲಿ ಮಗಳ ಆಶ್ರಯದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.

ಸುಮಾರು ವರ್ಷಗಳಿಂದ ಮಗಳ ಆಶ್ರಯದಲ್ಲಿಯೇ ಇರುವ ಲಕ್ಷ್ಮವ್ವನಿಗೆ ಸರ್ಕಾರದಿಂದ ಸಿಗುವ ವೃದ್ಯಾಪ್ಯ ವೇತನವೇ ಆಸರೆಯಾಗಿತ್ತು. ಇದೀಗ ಕಳೆದೆರೆಡು ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಮೂಲಕ ಬದುಕನ್ನು ಮತ್ತಷ್ಟು ಸುಂದರವಾಗಿಸಿಕೊಂಡಿದ್ದಾರೆ.

ADVERTISEMENT

ಮಗಳು ಕೂಡ ಯೋಜನೆಯಡಿ ಕೆಲಸ ಮಾಡುತ್ತಿದ್ದು, ಮಗಳ ಪತಿಯು ನಿಧನ ಹೊಂದಿರುವುದರಿಂದ ತಾಯಿ-ಮಗಳಿಗೆ ನರೇಗಾ ಆಸರೆಯಾಗಿದೆ.

ಹಿರಿಯರಿಗೆ ಕೆಲಸದಲ್ಲಿ ಶೇ 50 ರಷ್ಟು ರಿಯಾಯಿತಿ ಇರುವುದರಿಂದ ಲಕ್ಷ್ಮವ್ವನಿಗೆ ಅನುಕೂಲವಾಗಿದೆ. ಕೆಲಸದ ಸ್ಥಳದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಕೆಲಸ ಮಾಡುವವರಿಗೆ ಕುಡಿಯುವ ನೀರನ್ನು ಒದಗಿಸುವ ಕೆಲಸವನ್ನು ಲಕ್ಷ್ಮವ್ವ ಮಾಡುತ್ತಾರೆ. ಇದರಿಂದ ವಯಸ್ಕರಷ್ಟೇ ಸಮಾನ ವೇತನ ನರೇಗಾದಡಿ ಸಿಗುತ್ತಿರುವುದರಿಂದ ನಮ್ಮಂತ ವೃದ್ಧರಿಗೆ ಬಹಳ ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

'ನರೇಗಾ ಯೋಜನೆ ಅನೇಕ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿದ್ದು, ಕೂಲಿ ದಿನಗಳನ್ನು ಕೂಡಾ ಹೆಚ್ಚಿಸಲಾಗಿದೆ. ಯಾರೇ ಬಂದರೂ ಅವರ ಸಾಮರ್ಥ್ಯದ ಅನುಸಾರ ಕೆಲಸ ನೀಡುವ ಮೂಲಕ ಜನರಿಗೆ ಉದ್ಯೋಗ ನೀಡಲಾಗುತ್ತದೆ' ಎಂದು ಟಿಐಇಸಿ ಸಂಯೋಜಕ ಕೆ.ಶಿವಕುಮಾರ್ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.