ADVERTISEMENT

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 13:42 IST
Last Updated 19 ನವೆಂಬರ್ 2025, 13:42 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿಯಲ್ಲಿರುವ ಯತಿಗಳ ನವ ವೃಂದಾವನ ಜಾಗದ ಕುರಿತ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಬುಧವಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಶ್ರೀಗಳು ಒಲವು ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ನದಿಯ ಮಧ್ಯಭಾಗದಲ್ಲಿರುವ ನವವೃಂದಾವನದಲ್ಲಿ ಪದ್ಮನಾಥ ತೀರ್ಥರ ಆರಾಧನೆ ಆಚರಣೆಗೆ ಮೊದಲ ಒಂದೂವರೆ ದಿನ ರಾಯರ ಮಠ, ನಂತರದ ಒಂದೂವರೆ ದಿನ ಉತ್ತರಾದಿ ಮಠದವರಿಗೆ ನ್ಯಾಯಾಲಯ ಅನುಮತಿ ನೀಡಿತ್ತು. ಮಂಗಳವಾರದಿಂದ ಮೊದಲ ಒಂದೂವರೆ ದಿನ ರಾಯರ ಮಠದವರು ಆರಾಧನೆ ಆಚರಣೆ ಮಾಡುವಾಗ ಬುಧವಾರ ಸ್ಥಳಕ್ಕೆ ಬಂದ ಸತ್ಯಾತ್ಮತೀರ್ಥರಿಗೆ ಸುಬುಧೇಂದ್ರತೀರ್ಥ ಶ್ರೀಗಳು ಸ್ವಾಗತ ಕೋರಿದರು. ಬಳಿಕ ಇಬ್ಬರೂ ಪದ್ಮನಾಭ ತೀರ್ಥರ ವೃಂದಾವನಕ್ಕೆ ತೆರಳಿ ಮಹಾಮಂಗ‌ಳಾರತಿ ನೆರವೇರಿಸಿದರು. ಆಗ ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸುಬುಧೇಂದ್ರತೀರ್ಥರು ‘ಹಲವು ವರ್ಷಗಳಿಂದ ಉಭಯಮಠಗಳ ನಡುವೆ ಇರುವ ವಿವಾದಕ್ಕೆ ತೆರೆ ಎಳೆಯುವ ಉದ್ದೇಶಕ್ಕೆ ಭೇಟಿ ಆಗಿದ್ದೇವೆ. ಹಿಂದೆ ಚೆನ್ನೈ, ಬೆಂಗಳೂರಿನಲ್ಲಿಯೂ ಮಾತುಕತೆ ನಡೆಸಿದ್ದೆವು. ಪ್ರಸ್ತುತ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಆದರೆ ಪರಸ್ಪರ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡು ಅದನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ’ ಎಂದರು.

ADVERTISEMENT

ಉತ್ತರಾದಿ ಮಠದ ಶ್ರೀಗಳು ಮಾತನಾಡಿ ‘ಉಭಯ ಮಠಗಳ ನಡುವಿನ ವಿವಾದಗಳಿ‌ಗೆ ಹಲವು ವರ್ಷಗಳ ಇತಿಹಾಸವಿದೆ. ಸಮಸ್ಯೆ ಪರಿಹರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಆದಷ್ಟು ಬೇಗನೆ ಒಂದು ಒಳ್ಳೆಯ ನಿರ್ಧಾರಕ್ಕೆ ಬರಲಾಗುವುದು. ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲರೂ ಒಂದಾಗುವುದು ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಉತ್ತರಾದಿಮಠದ ಶ್ರೀಗಳ ಜೊತೆ ವ್ಯಕ್ತಿ ದ್ವೇಷ, ವಿವಾದಗಳು ಇಲ್ಲ. ಕೆಲ ಲೌಖಿಕ ವಿಚಾರಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿವೆ. ಭಕ್ತರು ಅನವಶ್ಯಕವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು.
ಸುಬುಧೇಂದ್ರತೀರ್ಥರು, ರಾಯರ ಮಠದ ಪೀಠಾಧಿಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.