ADVERTISEMENT

ಕೊಪ್ಪಳ: ಪ್ರೋತ್ಸಾಹಧನಕ್ಕೆ ವಿದ್ಯಾರ್ಥಿಗಳ ಅಲೆದಾಟ

ಎಸ್‌ಸಿ., ಎಸ್‌ಟಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ದೊರೆಯದ ಸೌಲಭ್ಯ

ಸಿದ್ದನಗೌಡ ಪಾಟೀಲ
Published 8 ಏಪ್ರಿಲ್ 2022, 4:47 IST
Last Updated 8 ಏಪ್ರಿಲ್ 2022, 4:47 IST
-
-   

ಕೊಪ್ಪಳ: ಪ್ರತಿವರ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳಿಗೆ ನೀಡು ತ್ತಿರುವ ಪ್ರೋತ್ಸಾಹ ಧನ ಸಕಾಲಕ್ಕೆ ಬಾರದೇ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಗೆ ಅಲೆದಾಡು ತ್ತಿರುವುದು ತಪ್ಪುತ್ತಿಲ್ಲ.

ಎಸ್ಸೆಸ್ಸೆಲ್ಸಿ ಹಾಗೂ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ಕಳೆದೆರಡು ವರ್ಷಗಳಿಂದ ಬಿಡುಗಡೆಗೊಳಿಸದ ಕಾರಣ ವಿದ್ಯಾರ್ಥಿಗಳು ಕಚೇರಿಗೆ ಅಲೆದಾಡುವಂತಾಗಿದೆ.

ಎಸ್ಸೆಸ್ಸೆಲ್ಸಿ, ಮೆಟ್ರಿಕ್ ನಂತರದ ಕೋರ್ಸ್‌ ಹಾಗೂ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ 60ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ₹ 15ಸಾವಿರ, ಪಿಯುಸಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹ 20 ಸಾವಿರ, ಪದವಿ ₹ 25 ಸಾವಿರ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ₹ 30 ಸಾವಿರ, ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಪದವಿ ವಿದ್ಯಾರ್ಥಿಗಳಿಗೆ₹ 35 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

ADVERTISEMENT

ಕೋವಿಡ್ ಹೆಸರಿನಲ್ಲಿ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ ಮಾಡಿದೆ. ವಿದ್ಯಾರ್ಥಿಗಳಿಗೆ ಬರಬೇಕಾದ ಪ್ರೋತ್ಸಾಹ ಧನವನ್ನು ಅರೆ ಬರೆಯಾಗಿ ಬಿಡುಗಡೆ ಮಾಡಿದ್ದು, ಒಬ್ಬರಿಗೆ ಸಿಕ್ಕರೆ ಮತ್ತೊಬ್ಬರಿಗೆ ಸಿಗದಂತಾಗಿದ್ದು, ಇದರಿಂದ ವಿದ್ಯಾರ್ಥಿಗಳು ನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಮಯಕ್ಕೆ ಬರಬೇಕಾದ ಹಣ ಬಾರದೆ ಪರಿತಪಿಸುತ್ತಿದ್ದಾರೆ.

ರಾಜ್ಯದಲ್ಲಿ 2019ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ಪರಿಶಿಷ್ಟ ಜಾತಿಯ 59,869 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 59,695 ಅರ್ಜಿಗಳನ್ನು ಅನುಮೋದನೆ ಮಾಡಲಾಗಿದೆ. ಎಸ್‌ಟಿ ವಿಭಾಗದಲ್ಲಿ 22,617 ಅರ್ಜಿ ಸಲ್ಲಿಕೆಯಾಗಿದ್ದು, 21,725 ಅರ್ಜಿಗಳನ್ನು ಅನುಮೋದಿಸಲಾಗಿದೆ. 1,050 ಅರ್ಜಿ ತಿರಸ್ಕರಿಸಲಾಗಿದೆ. 2020-21ರಲ್ಲಿ 22,617 ಅರ್ಜಿಗಳು ಸಲ್ಲಿಕೆಯಾಗಿದ್ದು, 21,725 ಅನುಮೋದನೆಗೊಂಡರೆ, 875 ತಿರಸ್ಕೃತವಾಗಿವೆ.

ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ 2019-20ರಲ್ಲಿ 80,745 ಅರ್ಜಿ ಸಲ್ಲಿಕೆಯಾಗಿವೆ. 71,446 ಅನುಮೋದನೆಯಾದರೆ, 8,714 ತಿರಸ್ಕಾರಗೊಂಡಿವೆ. 2020-21ರಲ್ಲಿ ಮೂರು ಬಾರಿ ಅರ್ಜಿ ಆಹ್ವಾನಿಸಲಾಗಿದೆ. 89,955 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 75,498 ಅನುಮೋದನೆ ಯಾಗಿವೆ. 14,410 ತಿರಸ್ಕೃತಗೊಂಡಿವೆ.

ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ₹ 2.67 ಕೋಟಿ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನ ಅನುದಾನ ಬಿಡುಗಡೆ ಬಾಕಿ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

'2020-21ನೇ ಸಾಲಿನ ಪ್ರೋತ್ಸಾಹ ಧನವಷ್ಟೇ ಬಿಡುಗಡೆ ಯಾಗಿಲ್ಲ.ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ₹ 2.67 ಕೋಟಿ ಪ್ರೋತ್ಸಾಹ ಧನ ಜಮಾ ಮಾಡಲಾಗಿದೆ. ಉಳಿದವರಿಗೆ ಹಂಚಿಕೆ ಮಾಡಲು ಇಲಾಖೆಗೆ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ನಂತರ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು' ಎನ್ನುತ್ತಾರೆಸಮಾಜ ಕಲ್ಯಾಣ ಇಲಾಖೆ, ಉಪನಿರ್ದೇಶಕನವೀನ್ ಶಿಂತ್ರೆ.

ವಿದ್ಯಾರ್ಥಿಗಳು ತಮ್ಮ ಖಾತೆಗೆ ಹಣವೇ ಬಂದಿಲ್ಲ ಎನ್ನುತ್ತಿದ್ದಾರೆ. ಕಚೇರಿ ಸಂಪರ್ಕಿಸಿದಾಗ ಅನುದಾನ ಬಿಡುಗಡೆಯಾಗಿಲ್ಲ. ಬಂದ ನಂತರ ವಿತರಿಸುವುದಾಗಿ ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.