ADVERTISEMENT

ಬೆಳೆ ನಷ್ಟದ ಮಾಹಿತಿ ರವಾನಿಸಲು ಸೂಚನೆ

ಕಾರಟಗಿಗೆ ಜಿಲ್ಲಾಧಿಕಾರಿ ಭೇಟಿ: ಅಧಿಕಾರಿಗಳೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 7:49 IST
Last Updated 16 ಡಿಸೆಂಬರ್ 2023, 7:49 IST
ಕಾರಟಗಿಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ಗೆ ಜನರು ಅಹವಾಲು ಸಲ್ಲಿಸಿದರು
ಕಾರಟಗಿಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ಗೆ ಜನರು ಅಹವಾಲು ಸಲ್ಲಿಸಿದರು   

ಕಾರಟಗಿ: ಇಲ್ಲಿನ ತಹಶೀಲ್ದಾರ್‌ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರು ಅಧಿಕಾರಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಬರ ಪರಿಹಾರದ ಕ್ರಮಗಳ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿ, ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರ ಮಾಹಿತಿಯನ್ನು ಶೀಘ್ರವೇ ಸಂಗ್ರಹಿಸಿ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡಿ ಕೆಲಸ ಮಾಡುವ ಜತೆಗೆ ರೈತರಿಗೆ ಸಂಬಂಧಿಸಿದ ವಿಷಯಗಳಿಗೆ ತಕ್ಷಣವೇ ಸ್ಪಂದಿಸಿ, ದಕ್ಷತೆಯಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.

ADVERTISEMENT

ಸಭೆಯ ಬಳಿಕ ಜಿಲ್ಲಾಧಿಕಾರಿ ಹೊರಬರುತ್ತಿದ್ದಂತೆಯೇ ಸಾರ್ವಜನಿಕರು, ರೈತ ಮುಖಂಡರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ತಾಲ್ಲೂಕಿನ ರೈತರಿಗೆ ಶೀಘ್ರವೇ ಬರ ಪರಿಹಾರವಲ್ಲದೇ, ಬೆಳೆ ನಷ್ಟದ ಪರಿಹಾರ ನೀಡುವಂತೆ ರೈತ ಮುಖಂಡರು ಒತ್ತಾಯಿಸಿದಾಗ, ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಪಟ್ಟಣದ ಕೆರೆ ಪ್ರದೇಶದಲ್ಲಿ ತ್ಯಾಜ್ಯ ಹಾಕುವುದಲ್ಲದೇ ಅಲ್ಲಿ ಪ್ಲಾಸ್ಟಿಕ್‌ ಸುಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಪುರಸಭೆ ಮುಖ್ಯಧಿಕಾರಿಗೆ ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪಟ್ಟಣದ ಜನಸಂಖ್ಯೆ 40 ಸಾವಿರ ದಾಟಿದ್ದು, ಗ್ರಾಮ ಒನ್‌ ಕೇಂದ್ರಗಳನ್ನು ಹೆಚ್ಚು ತೆರೆಯುವಂತೆ ಅನೇಕರು ಗಮನ ಸೆಳೆದರು. ದಶಕಗಳೇ ಕಳೆದರೂ ಅನೇಕ ಅಧಿಕಾರಿಗಳು ಇದ್ದ ಸ್ಥಳದಲ್ಲೇ ಬೀಡು ಬಿಟ್ಟಿರುವ ಬಗ್ಗೆ ರೈತ ಮುಖಂಡರೊಬ್ಬರು ಗಮನ ಸೆಳೆದಾಗ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.