ಕಾರ್ಮಿಕರು
(ಸಾಂದರ್ಭಿಕ ಚಿತ್ರ)
ಕೊಪ್ಪಳ: ರಾಜ್ಯದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಗೆ ಏಳು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಅಂದಾಜು 5,400 ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ.
ಜಿಲ್ಲಾ ಐಇಸಿ ಸಂಯೋಜಕ, ಜಿಲ್ಲಾ ಲೆಕ್ಕ ವ್ಯವಸ್ಥಾಪಕರು, ತಾಲ್ಲೂಕು ಆಡಳಿತ ಸಹಾಯಕರು, ತಾಲ್ಲೂಕು ಐಇಸಿ ಸಂಯೋಜಕ, ಸಹಾಯಕ ಕಾರ್ಯಕ್ರಮ ಸಂಯೋಜಕರು, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ್ ಮಿತ್ರ, ತಾಂತ್ರಿಕ ಸಂಯೋಜಕರು ಹೀಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹುದ್ದೆಗಳಲ್ಲಿ ಇರುವವರು ಬಹುತೇಕರು ಬಡ ಮತ್ತು ಮಧ್ಯಮ ವರ್ಗದವರು.
ಕಾರಣವೇನು: ಕೇಂದ್ರ ಸರ್ಕಾರ ಕಳೆದ ವರ್ಷ ತನ್ನ ಯೋಜನೆಗಳ ಲೆಕ್ಕಪತ್ರಗಳ ನಿರ್ವಹಣೆಯನ್ನು ಎಸ್‌ಎನ್‌ಎ ಸ್ಪರ್ಶ್ ತಂತ್ರಾಂಶದ ಮೂಲಕ ಆರಂಭಿಸಿದೆ. ರಾಜ್ಯ ಸರ್ಕಾರ ನರೇಗಾ ಮತ್ತು ಖಜಾನೆ–2 ಜೊತೆ ಸೇರಿಸಿ ರೀಟ್ ಎನ್ನುವ ತಂತ್ರಾಂಶ ಅಭಿವೃದ್ಧಿ ಪಡಿಸಿತ್ತು.
ಕೇಂದ್ರದ ಸೂಚನೆ ಮೇರೆಗೆ ರಾಜ್ಯವೂ ಸ್ಪರ್ಶ್ ತಂತ್ರಾಂಶ ಅಳವಡಿಸಿಕೊಂಡಿದ್ದು ಇದು ಖಜಾನೆ–2 ಜೊತೆ ಸುಗಮವಾಗಿ ಕೆಲಸ ಮಾಡುವ ವಿಷಯ ಖಚಿತಪಡಿಸಿಕೊಳ್ಳದೆ ರೀಟ್ ತಂತ್ರಾಂಶವನ್ನು ನಿಷ್ಕ್ರಿಯ ಮಾಡಿದ್ದರಿಂದ ಹಣವಿದ್ದರೂ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಹೇಳುತ್ತಾರೆ.
ಬಹಳಷ್ಟು ಸಿಬ್ಬಂದಿಗೆ ಮೇ, ಜೂನ್‌ನಲ್ಲಿ ಮಕ್ಕಳ ಶಿಕ್ಷಣದ ಶುಲ್ಕ ಪಾವತಿಸಲಾಗಿಲ್ಲ. ಅವಲಂಬಿತರ ಆರೋಗ್ಯ ಸಂಬಂಧಿ ಖರ್ಚುಗಳ ನಿರ್ವಹಣೆ ಮಾಡಲು ಹಣವಿಲ್ಲದಂತಾಗಿದೆ. ಬಾಕಿ ವೇತನಕ್ಕಾಗಿ ಅನೇಕ ಕಡೆ ಸಿಬ್ಬಂದಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಸದ್ಯ, ಕಚೇರಿಯಲ್ಲಿದ್ದುಕೊಂಡೇ ಕರ್ತವ್ಯಕ್ಕೆ ’ಅಸಹಕಾರ’ ಹೋರಾಟ ನಡೆಸುತ್ತಿದ್ದಾರೆ.
‘ಮಾಸಿಕ ವೇತನವನ್ನೇ ಈ ಸಿಬ್ಬಂದಿ ಆಧರಿಸಿದ್ದಾರೆ. ಮಕ್ಕಳಿಗೆ ಅಗತ್ಯ ವಸ್ತು ಕೊಡಿಸಲು ಸಾಧ್ಯವಾಗಿಲ್ಲ. ಅವಲಂಬಿತರ ಆರೋಗ್ಯ ಕಾಳಜಿ ಮಾಡಲಾಗುತ್ತಿಲ್ಲ’ ಎಂದು ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ ಚಿತ್ರಗಾರ, ಬಾಳಪ್ಪ ಬೇಸರ ವ್ಯಕ್ತಪಡಿಸಿದರು.
ಜೀವನ ಸಾಗಿಸಲು ಸಿಬ್ಬಂದಿ ಪರದಾಟ ಹಳೆಯ ರೀಟ್ ತಂತ್ರಾಂಶ ನಿಷ್ಕ್ರಿಯ ಖಜಾನೆ–2 ಜೊತೆ ಹೊಂದಿಕೆಯಾಗದ ಹೊಸ ತಂತ್ರಾಂಶ
ತಂತ್ರಾಂಶದ ಬದಲಾವಣೆಯ ತಾಂತ್ರಿಕ ಕಾರಣದಿಂದ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವೇತನವಿಲ್ಲದ ಕಾರಣಕ್ಕೆ ದಿನದೂಡುವುದೇ ಕಷ್ಟವಾಗುತ್ತಿದೆಸುರೇಶ ಬಾಳಿಕಾಯಿ ಉಪಾಧ್ಯಕ್ಷ ರಾಜ್ಯ ನರೇಗಾ ಕ್ಷೇಮಾಭಿವೃದ್ಧಿ ಸಂಘ
ಹೊಸ ತಂತ್ರಾಂಶ ಅಳವಡಿಕೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ವೇತನ ಪಾವತಿ ವಿಳಂಬವಾಗಿದೆ. ರಾಜ್ಯದಾದ್ಯಂತ ಸಮಸ್ಯೆ ಇದ್ದು ಇದೇ ತಿಂಗಳು ಪರಿಹಾರವಾಗುವ ನಿರೀಕ್ಷೆಯಿದೆವರ್ಣೀತ್ ನೇಗಿ ಜಿಲ್ಲಾ ಪಂಚಾಯಿತಿ ಸಿಇಒ ಕೊಪ್ಪಳ
‘ಎರಡು ದಿನಗಳಲ್ಲಿ ವೇತನ ಪಾವತಿ’
ಕೇಂದ್ರದಿಂದ ಅನುದಾನ ಬರುವುದು ತಡವಾಗಿತ್ತು. ಈ ಬಗ್ಗೆ ಎರಡು ಬಾರಿ ಪತ್ರ ಬರೆದಿದ್ದೆ. ಅಲ್ಲದೇ ಕೇಂದ್ರದ ಎನ್ಐಸಿ ಪೋರ್ಟಲ್ ರಾಜ್ಯದ ಖಜಾನೆ–2ನೊಂದಿಗೆ ಹೊಂದಿಕೆಯಾಗುವುದರಲ್ಲಿ ತಾಂತ್ರಿಕ ದೋಷಗಳು ಎದುರಾಗಿದ್ದವು. ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಸಿಬ್ಬಂದಿಗೆ ವೇತನ ಜಮಾ ಮಾಡಲಾಗಿದ್ದು, ಇನ್ನು ಎರಡು ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ನರೇಗಾ ಸಿಬ್ಬಂದಿಗೆ ವೇತನ ಪಾವತಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.