ADVERTISEMENT

ಸುಸ್ಥಿತಿ ಕಟ್ಟಡ ನೆಲಸಮಕ್ಕೆ ಮುಂದಾದ ಅಧಿಕಾರಿಗಳು

ಹಿಂದುಳಿದ ವರ್ಗಗಳ ಖಾತೆ ಸಚಿವರ ಜಿಲ್ಲೆಯ ‘ನತದೃಷ್ಟ ಕಟ್ಟಡ’

ನಾರಾಯಣರಾವ ಕುಲಕರ್ಣಿ
Published 9 ಆಗಸ್ಟ್ 2023, 7:45 IST
Last Updated 9 ಆಗಸ್ಟ್ 2023, 7:45 IST
ಕುಷ್ಟಗಿಯಲ್ಲಿನ ಬಿಸಿಎಂ ಇಲಾಖೆಗೆ ಸೇರಿದ ಹಾಸ್ಟೆಲ್ ಕಟ್ಟಡ ಅನಾಥ ಸ್ಥಿತಿಯಲ್ಲಿರುವುದು
ಕುಷ್ಟಗಿಯಲ್ಲಿನ ಬಿಸಿಎಂ ಇಲಾಖೆಗೆ ಸೇರಿದ ಹಾಸ್ಟೆಲ್ ಕಟ್ಟಡ ಅನಾಥ ಸ್ಥಿತಿಯಲ್ಲಿರುವುದು   

ಕುಷ್ಟಗಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಹಿಂಬದಿಯಲ್ಲಿರುವ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ವಸತಿನಿಲಯ ಕಟ್ಟಡ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳು ಬಿದ್ದಿದೆ. ಬಡ ಮಕ್ಕಳಿಗೆ ಆಶ್ರಯ ತಾಣವಾಗಬೇಕಿದ್ದ ಈ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸುಸಜ್ಜಿತ ಅಡುಗೆ ಮನೆ, ಮೇಲ್ವಿಚಾರಕರ ಕೊಠಡಿ ಸೇರಿ ಕಲ್ಲಿನ ಗೋಡೆಯಿಂದ ನಿರ್ಮಾಣಗೊಂಡಿರುವ ಹತ್ತು ಕೊಠಡಿಗಳನ್ನು ಒಳಗೊಂಡ ಕಟ್ಟಡ ಮತ್ತು ಅದರ ಚಾವಣಿಯೂ ಗಟ್ಟಿಮುಟ್ಟಾಗಿ ಇದೆ. ಗೋಡೆಗಳು ಅಲ್ಲಲ್ಲಿ ಅಲ್ಪಸ್ವಲ್ಪ ಬಿರುಕು ಬಿಟ್ಟಿವೆ. ಹೆಗ್ಗಣಗಳ ಹಾವಳಿಯಿಂದ ಕುಸಿದಿರುವ ನೆಲಹಾಸು, ಪುಂಡಪೋಕರಿಗಳ ಕೈಗೆ ಸಿಕ್ಕು ವಿದ್ಯುತ್‌ ಸಲಕರಣೆಗಳು ಹಾಳಾಗಿರುವುದು, ಬೆಲೆಬಾಳುವ ಅಡುಗೆ ಸಲಕರಣೆಗಳು, ಸೋಲಾರ್ ಘಟಕ ದಿಕ್ಕಿಲ್ಲದಂತಾಗಿರುವುದು ಕಂಡುಬರುತ್ತದೆ.

ಸಣ್ಣಪುಟ್ಟ ದುರಸ್ತಿ ಮಾಡಿದರೆ ಕಟ್ಟಡದ ಪುನರ್ ಬಳಕೆ ಸಾಧ್ಯವಾಗುತ್ತದೆ. ಪಟ್ಟಣದಲ್ಲಿ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು ಅವುಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲು ಸಾಧ್ಯವಿದೆ. ಆದರೆ ಅಧಿಕಾರಿಗಳಿಗೆ ಅಂಥ ಚಿಂತನೆ ಇಲ್ಲ. ಬದಲಾಗಿ ಕಟ್ಟಡ ದುಸ್ಥಿತಿಯಲ್ಲಿದೆ ಎಂಬ ಕಾರಣ ನೀಡಿ ಸಾರ್ವಜನಿಕ ಆಸ್ತಿಯನ್ನು ನೆಲಸಮ ಮಾಡಲು ಮುಂದಾಗಿರುವ ಇಲಾಖೆ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿದೆ.

ADVERTISEMENT

ಈ ಹಿಂದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಂತರ ಈ ಕಟ್ಟಡದಲ್ಲಿ ಆಶ್ರಮ ಶಾಲೆ ನಡೆಯುತ್ತಿತ್ತು. ನಂತರ ಅದನ್ನು ಉನ್ನತೀಕರಿಸಿ ಡಿ.ದೇವರಾಜ ಅರಸು ಹೆಸರಿನಲ್ಲಿ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್ ಆಗಿ ಬಳಸಿಕೊಳ್ಳಲಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಹಾಸ್ಟೆಲ್‌ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ 2021ರಿಂದ ಇದು ಅನಾಥವಾಗಿದೆ.

‘ಬಳಕೆ ಇಲ್ಲದಿದ್ದರೂ ಕಟ್ಟಡದ ವಿದ್ಯುತ್‌ ಸಂಪರ್ಕ ಇನ್ನೂ ಹಾಗೇ ಇದೆ. ಎಲ್ಲ ಕೊಠಡಿಗಳ ಬಾಗಿಲು, ಕಿಟಕಿಗಳನ್ನು ಕಿಡಿಗೇಡಿಗಳು ಮುರಿದು ಹಾಕಿದ್ದಾರೆ. ಕೊಠಡಿಗಳಲ್ಲಿನ ಬೋರ್ಡ್‌ಗಳಲ್ಲಿ ಅಶ್ಲೀಲ ಪದಗಳು ಕಣ್ಣಿಗೆ ರಾಚುತ್ತಿವೆ. ಎಲ್ಲ ಕೊಠಡಿಗಳೂ ಮದ್ಯ ವ್ಯಸನಿಗಳಿಗೆ ಅನುಕೂಲವಾಗಿದ್ದು ಮದ್ಯದ ಬಾಟಲಿ, ಬಾಡೂಟ ಮಾಡಿದ ಕುರುಹುಗಳು ಕಂಡುಬರುತ್ತಿವೆ. ಕಿಡಿಗೇಡಿಗಳ ತಾಣವಾಗಿರುವುದರಿಂದ ಈ ಕಟ್ಟಡದತ್ತ ಸಾರ್ವಜನಿಕರು ಸುಳಿಯುವುದಿಲ್ಲ. ಅಧಿಕಾರಿಗಳು ಇತ್ತ ಕಣ್ಣು ಹಾಯಿಸಿಲ್ಲ. ಹಿಂದುಳಿದ ವರ್ಗಗಳ ಖಾತೆ ಹೊಂದಿರುವ ಶಿವರಾಜ ತಂಗಡಗಿ ಅವರ ತವರು ಜಿಲ್ಲೆಯಲ್ಲೇ ಇಂಥ ಅದ್ವಾನ ನಡೆಯುತ್ತಿದೆ’ ಎಂದು ಪಟ್ಟಣದ ಇಮಾಮಸಾಬ್, ಪರಶುರಾಮ ಕಡಗದ ಇತರರು ದೂರುತ್ತಾರೆ.

ಹಾಳು ಬಿದ್ದಿರುವ ಅಡುಗೆ ಕೋಣೆಯಲ್ಲಿ ಕಂಡುಬರುವ ಸಲಕರಣೆಗಳು
ಕಟ್ಟಡ ನೆಲಸಮಗೊಳಿಸಲು ನಿರ್ಧರಿಸಿರುವ ಮಾಹಿತಿ ತಿಳಿದಿಲ್ಲ. ಅದರ ಸ್ಥಿತಿಗತಿ ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.
ಶಿವರಾಜ ತಂಗಡಗಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ

ಬಿಸಿಎಂ ಅಧಿಕಾರಿ ಅಸ್ಪಷ್ಟ ಹೇಳಿಕೆ

‘ಶಿಥಿಲಗೊಂಡಿರುವ ಕಟ್ಟಡ ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆ ತಾಂತ್ರಿಕ ವರದಿ ನೀಡಿದ್ದು ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆಯಲಿದೆ’ ಎಂದು ಬಿಸಿಎಂ ಇಲಾಖೆ ತಾಲ್ಲೂಕು ಅಧಿಕಾರಿ ಶ್ರೀನಿವಾಸ ನಾಯಕ ಹೇಳುತ್ತಾರೆ. ಆದರೆ ‘ಕಟ್ಟಡ ಮಕ್ಕಳ ವಾಸಕ್ಕೆ ಯೋಗ್ಯವಾಗಿಲ್ಲ’ ಎಂದಷ್ಟೇ ಲೋಕೋಪಯೋಗಿ ಇಲಾಖೆ ಪತ್ರ ಬರೆದಿದೆ ಹೊರತು ನೆಲಸಮಕ್ಕೆ ಶಿಫಾರಸು ಮಾಡಿಲ್ಲ ಎಂಬುದು ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಯಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಬಿಸಿಎಂ ಅಧಿಕಾರಿ ಸ್ಪಷ್ಟ ಮಾಹಿತಿ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.