ADVERTISEMENT

ಹಳೆ ವೈಷಮ್ಯ | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ: ನಾಲ್ವರು ಆರೋಪಿಗಳು ಶರಣು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:38 IST
Last Updated 9 ಅಕ್ಟೋಬರ್ 2025, 5:38 IST
ಗಂಗಾವತಿ ಮುರಾಹರಿ ನಗರದ ನಿವಾಸಕ್ಕೆ ಶಾಸಕ ಜಿ. ಜನಾರ್ದನರೆಡ್ಡಿ ಭೇಟಿ ನೀಡಿ, ವೆಂಕಟೇಶನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು
ಗಂಗಾವತಿ ಮುರಾಹರಿ ನಗರದ ನಿವಾಸಕ್ಕೆ ಶಾಸಕ ಜಿ. ಜನಾರ್ದನರೆಡ್ಡಿ ಭೇಟಿ ನೀಡಿ, ವೆಂಕಟೇಶನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು   

ಗಂಗಾವತಿ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಜೆ.(34) ಎಂಬುವವರ ಮೇಲೆ ಕಾರಿನಲ್ಲಿ ಬಂದ ಯುವಕರ ಗುಂಪೊಂದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದು, ಘಟನೆಗೆ ನಗರದ ಜನತೆ ಬೆಚ್ಚಿಬಿದ್ದಿದೆ.

ನಗರದ ಲೀಲಾವತಿ ಆಸ್ಪತ್ರೆ ಸಮೀಪ, ಕೊಪ್ಪಳ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕುತ್ತಿಗೆ, ಮುಖ, ದೇಹದ ತುಂಬೆಲ್ಲ ತೀವ್ರ ಗಾಯಗಳಾಗಿದ್ದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಸೋಮವಾರ ರಾತ್ರಿ ಚಟಾಟಿ ಮಂಜ ಎನ್ನುವವರ ಕುರಿ ಶೆಡ್‌ನಲ್ಲಿ ವೆಂಕಟೇಶ ಸೇರಿ ಆತನ ಸ್ನೇಹಿತರು ಊಟ ಮಾಡಿ ಮಲಗಿ, ಮಂಗಳವಾರ ಬೆಳಿಗ್ಗೆ 2.15ಕ್ಕೆ ಎಚ್ಚರಗೊಂಡು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿರುವಾಗ ಲೀಲಾವತಿ ಆಸ್ಪತ್ರೆ ಬಳಿ ಇವರನ್ನೇ ಕಾದ ಇಂಡಿಕಾ ಕಾರೊಂದು ವೆಂಕಟೇಶ ಕುಳಿತಿದ್ದ ಬೈಕನ್ನು ಹಿಂಬದಿಯಿಂದ ಡಿಕ್ಕಿ ಹೊಡೆಯಿತು.

ADVERTISEMENT

ಇದರಿಂದ ವೆಂಕಟೇಶ ನೆಲಕ್ಕುರುಳಿದ್ದು, ಸ್ನೇಹಿತರೆಲ್ಲರೂ ಅವರನ್ನು ಎಬ್ಬಿಸಲು ಹೋಗುವಷ್ಟರೊಳಗಡೆ ಕಾರಿನಿಂದ ಇಳಿದ ಯುವಕರ ಗುಂಪೊಂದು ಸಿನಿಮೀಯ ರೀತಿಯಲ್ಲಿ ಲಾಂಗ್ ಹಿಡಿದುಕೊಂಡು ಓಡಿ ಬಂದಿದ್ದು, ಸ್ನೇಹಿತರೆಲ್ಲರೂ ಹೆದರಿ ಓಡಿ ಹೋದರು. ಯುವಕರ ಗುಂಪು ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ಪರಾರಿಯಾಗಿದ್ದಾರೆ.

ತಡರಾತ್ರಿಯೇ ಎಸ್‌ಪಿ ರಾಮ್ ಎಲ್ ಅರಸಿದ್ದಿ, ನಗರಠಾಣೆ ಪಿಐ ಪ್ರಕಾಶ ಮಾಳೆ, ಡಿವೈಎಸ್ಪಿ ಸಿದ್ದಲಿಂಗಪ್ಪ ಪೊಲೀಸ್ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಿಗ್ಗೆ ರವಿ ಸೇರಿ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆ ಮುಂದೆ ಜನಸ್ತೋಮ: ವೆಂಕಟೇಶ ಜೆ. ಅವರ ಕೊಲೆ ವಿಷಯ ತಿಳಿದ ಆತನ ಸ್ನೇಹಿತರು, ಕುಟುಂಬಸ್ಥರು, ಗ್ರಾಮಸ್ಥರು, ವಾರ್ಡಿನವರೆಲ್ಲರೂ ಠಾಣೆ ಬಳಿ ಜಮಾಯಿಸಿದ್ದರು. ಹಾಗೇ ಆರೋಪಿಗಳ ವಾರ್ಡಿನವರು ಸಹ ಠಾಣೆಗೆ ಬಂದಿದ್ದು, ಆಸ್ಪತ್ರೆ, ಕೋರ್ಟ್ ಮುಖ್ಯರಸ್ತೆಯಲ್ಲಿ ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದರು.

ಶಾಸಕ,‌ ಮಾಜಿ ಶಾಸಕರಿಂದ ಮೃತರ ಕುಟುಂಬಕ್ಕೆ ಸಾಂತ್ವನ: ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ವೆಂಕಟೇಶ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ನಂತರ ಮಾತನಾಡಿದ ಶಾಸಕ, ‘ವೆಂಕಟೇಶನ ಕೊಲೆ ಅಮಾನವೀಯ.‌ ಈ ಹಿಂದೆಯೇ ಅವರಿಗೆ ಬೇರೆ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇರುವ ಬಗ್ಗೆ ಠಾಣೆಯಲ್ಲಿ ಮಾಹಿತಿ ಇತ್ತು. ಪೊಲೀಸರು ಬೆದರಿಕೆ ನೀಡಿದವರನ್ನು ಕರೆಯಿಸಿ, ಎಚ್ಚರಿಕೆ ನೀಡಿ, ಕ್ರಮಕೈಗೊಂಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಗಂಗಾವತಿ ಕ್ಷೇತ್ರದಲ್ಲಿ ಪೊಲೀಸರ ವೈಫಲ್ಯದಿಂದ ಸಾಕಷ್ಟು ಕೊಲೆ, ಹಲ್ಲೆ, ದಂಧೆಗಳು ಜರುಗುತ್ತಿವೆ. ಇದು ನಿಯಂತ್ರಣಕ್ಕೆ ಬರಬೇಕು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದರು.

ಕೊಲೆಗೆ ಹಳೆ ವೈಷಮ್ಯ ಕಾರಣ

‘ಈ ಹಿಂದೆ ತನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ರವಿ ಭೀಮ ಆಕಾಶ ಇಂದ್ರೇಶ ವಿರೇಶ ಎನ್ನುವ ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆ ಆಗುವಂತೆ ಮಾಡಿದ್ದಕ್ಕೆ ದ್ವೇಷದಿಂದ ನನ್ನ ಮಗನನ್ನು ಕೊಲೆ ಮಾಡಿದ್ದಾರೆ’ ಎಂದು ಮೃತವ್ಯಕ್ತಿ ತಂದೆ ಹಂಪಣ್ಣ ಜಂತಕಲ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಕಂಪ್ಲಿಯಲ್ಲಿ ಆರೋಪಿಗಳು ಶರಣು

ನಗರದ ಲೀಲಾವತಿ ಆಸ್ಪತ್ರೆ ಬಳಿ ವೆಂಕಟೇಶನನ್ನು ಮಾರಕಾಸ್ತ್ರಗ‌ಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಗಳು ಮಂಗಳವಾರ ಬೆಳಿಗ್ಗೆ ಕಂಪ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಗಂಗಾವತಿ ಬಸವಣ್ಣ ಕ್ಯಾಂಪಿನ ಭೀಮ ಕರಿಯಪ್ಪ ಅಮರ್‌ ಭಗತ್ ಸಿಂಗ್ ನಗರದ ಸಲೀಂ ರಫೀಕ್ ಇಂದಿರಾ ನಗರದ ವಿಜಯ್ ಹನುಮಂತಪ್ಪ 28ನೇ ವಾರ್ಡಿನ ಧನರಾಜ ಲಕ್ಷ್ಮ ಣರಾವ್ ಶರಣಾದ ಆರೋಪಿಗಳು. ಇನ್ನುಳಿದವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.