ADVERTISEMENT

ಕಡಲೇಕಾಳು ಖರೀದಿ ಕೇಂದ್ರಗಳ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 14:19 IST
Last Updated 7 ಫೆಬ್ರುವರಿ 2025, 14:19 IST

ಕೊಪ್ಪಳ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೇಕಾಳು ಉತ್ಪನ್ನ ಖರೀದಿಸಲು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೇಕಾಳು ಪ್ರತಿ ಕ್ವಿಂಟಲ್‌ಗೆ ₹5,650ರಂತೆ ಎಕರೆಗೆ ನಾಲ್ಕು ಕ್ವಿಂಟಲ್‌ನಲ್ಲಿ ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಖರೀದಿ ಮಾಡಲಾಗುತ್ತದೆ.

ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ, ಹಿರೇಸಿಂದೋಗಿ, ಕವಲೂರು, ಅಳವಂಡಿ, ಘಟ್ಟಿರೆಡ್ಡಿಹಾಳ, ಕನಕಗಿರಿ ತಾಲ್ಲೂಕಿನ ನವಲಿ, ಕನಕಗಿರಿ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ತಾವರಗೇರಾ (ಮೆಣೇದಾಳ), ಕುಷ್ಟಗಿ, ಕುಕನೂರು ತಾಲ್ಲೂಕಿನ ಚಿಕ್ಕೇನಕೊಪ್ಪ, ಬನ್ನಿಕೋಪ್ಪ, ತಳಕಲ್, ಮುಡಲಗೇರಿ, ಕುಕನೂರು, ಯಲಬುರ್ಗಾ ತಾಲ್ಲೂಕಿನ ಯಲಬುರ್ಗಾ, ಮುಧೋಳ ಹಾಗೂ ತೊಂಡಿಹಾಳದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲಾ ಕಾರ್ಯಪಡೆ ಸಮಿತಿ ಇತ್ತೀಚೆಗೆ ಸಭೆ ನಡೆಸಿ ತೀರ್ಮಾನಿಸಿದೆ.

ADVERTISEMENT

ಕೊಪ್ಪಳ ತಾಲ್ಲೂಕಿನ ಖರೀದಿ ಕೇಂದ್ರಗಳಿಗೆ ಎಪಿಎಂಸಿ ಕಾರ್ಯದರ್ಶಿ ವಿ.ಬಸವರಾಜ (9448765143), ಕನಕಗಿರಿ ವ್ಯಾಪ್ತಿಗೆ ಗಂಗಾವತಿ ಎಪಿಎಂಸಿ ಕಾರ್ಯದರ್ಶಿ ಹರೀಶ ಪತ್ತಾರ (9060893320) ಕುಷ್ಟಗಿ ವ್ಯಾಪ್ತಿಗೆ ಅಲ್ಲಿನ ಎಪಿಎಂಸಿ ಕಾರ್ಯದರ್ಶಿ ಸುರೇಶ ಬಿ ತಂಗನೂರು (9880886909) ಕುಕನೂರು ಹಾಗೂ ಯಲಬುರ್ಗಾ ವ್ಯಾಪ್ತಿಯ ಕೇಂದ್ರಗಳಿಗೆ ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್ ಗುಡಿ (9972054874) ಅವರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇನ್ನಷ್ಟು ಮಾಹಿತಿಗಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕೊಪ್ಪಳ (08539-230040) ಸಂಪರ್ಕಿಸಬಹುದು.

ಜಿಲ್ಲೆಯಲ್ಲಿ ರಸ್ತೆ ಸಂಚಾರ ಸಮೀಕ್ಷೆ 17ರಿಂದ

ಕೊಪ್ಪಳ: ರಾಜ್ಯ ಲೋಕೋಪಯೋಗಿ ಇಲಾಖೆಯು ಜಿಲ್ಲೆಯಲ್ಲಿ ಫೆ. 17ರಿಂದ 24ರ ವರೆಗೆ ರಸ್ತೆ ಸಂಚಾರದ ಸಮೀಕ್ಷೆ ಹಮ್ಮಿಕೊಂಡಿದೆ.

ಇಲಾಖೆಯಿಂದ ಪ್ರತಿ ವರ್ಷಕೂಮ್ಮೆ ಎರಡು ದಿನ ಮತ್ತು ಐದು ವರ್ಷಗಳಿಗೊಮ್ಮೆ ಏಳು ದಿನಗಳ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಅಗಲಳತೆ ತೀರ್ಮಾನಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಣೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸಂಚಾರ ಸಮೀಕ್ಷೆ ಮಾನದಂಡವಾಗುತ್ತದೆ.

‘ರಸ್ತೆ ಸಂಚಾರ ಸಮೀಕ್ಷೆಗಾಗಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸಮೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ರಸ್ತೆಗಳ ಮೇಲೆ ಕ್ಯಾಮೆರಾ ಆಧಾರಿತ ಕೇಂದ್ರಗಳು ಇರಲಿದ್ದು, ಸೂಚನಾ ಫಲಕವೂ ಇರುತ್ತದೆ. ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸಬೇಕು’ ಎಂದು ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.