ADVERTISEMENT

ಗಂಗಾವತಿ: 200ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನೀರುಪಾಲು

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು, ಮುಳುಗಿದ ಸೇತುವೆ: ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 12:22 IST
Last Updated 21 ನವೆಂಬರ್ 2021, 12:22 IST
ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ಮೇಲೆ ನೀರು ಬಂದಿರುವುದು
ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ಮೇಲೆ ನೀರು ಬಂದಿರುವುದು   

ಗಂಗಾವತಿ: ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ನದಿಗೆ ನೀರು ಬಿಡಲಾಗಿದೆ. ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ಜಲಾವೃತವಾಗಿದೆ.

ಸೇತುವೆ ಮುಳುಗಡೆಯಾದ ಕಾರಣ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ತೆಲಂಗಾಣದ ಹೈದರಾಬಾದ್‌, ಮಂತ್ರಾಲಯ ಸೇರಿ ಪ್ರಮುಖ ನಗರಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥದ ಬಳಿ ಇನ್ನೂ ನೀರು ಕಡಿಮೆಯಾಗಿಲ್ಲ. ಹಂಪಿಯ ರಾಮ ಲಕ್ಷ್ಮಣ ದೇವಸ್ಥಾನದ ಅಂಗಳಕ್ಕೆ ನೀರು ಹೊಕ್ಕಿದೆ.

ADVERTISEMENT

ವಿರುಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿಯ ಕೃಷ್ಣ ದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಭಾಗಶಃ ಮುಳುಗಿವೆ. ನವಬೃಂದಾವನಕ್ಕೆ ಸಂಪರ್ಕ ಕಡಿತಗೊಂಡಿದೆ.

ಭತ್ತ ಸಂಪೂರ್ಣ‌ ನಾಶ: ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಬೆಳೆಗಳು ಕಟಾವು ಹಂತಕ್ಕೆ ಬಂದಿವೆ. ಜಲಾಶಯದಿಂದ ನದಿಗೆ ನೀರು ಹರಿಬಿಟ್ಟ ಪರಿಣಾಮ ಜಲಾವೃತ ಗೊಂಡಿವೆ.

ಹೆಬ್ಬಾಳ, ಡಾಣಪುರ, ಚಿಕ್ಕ ಜಂತಕಲ್, ಹನುಮನಹಳ್ಳಿ, ದೇವಘಾಟ್, ಲಕ್ಷ್ಮಿಪುರ, ನಾಗನಳ್ಳಿ ಗ್ರಾಮಗಳ ನದಿ ಪಾತ್ರದ 200 ಎಕರೆಗೂ ಹೆಚ್ಚು ಭತ್ತದ ಬೆಳೆ, ಕಬ್ಬು, ಬಾಳೆಗೆ ಹಾನಿಯಾಗಿದೆ.

‘ಭತ್ತದ ಬೆಳೆ ಕಟಾವು ಹಂತಕ್ಕೆ ಬಂದಿತ್ತು. ಇನ್ನೇನೂ ಎರಡು ಮೂರು ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ ನಿರಂತರ ಮಳೆ ಮತ್ತು ನದಿ ನೀರಿನಿಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ರೈತರು ಆಗ್ರಹಿಸಿದರು.

ಕಂಪ್ಲಿ- ಗಂಗಾವತಿ ಸೇತುವೆ 1944 ಅಡಿ ಉದ್ದ, 22 ಅಡಿ ಅಗಲ ಇದ್ದು, ಅದರ 38 ಅಡಿಯ 51 ಕಮಾನುಗಳಲ್ಲಿ ಶನಿವಾರ ನೀರು ಹರಿದಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಶನಿವಾರ 82,083, ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಆದರೆ ಸಂಜೆ ವೇಳೆಗೆ ಅದು 35,000 ಕ್ಯುಸೆಕ್‌ಗೆ ಹೆಚ್ಚಿತು. ಜಲಾಶಯದ 28 ಕ್ರಸ್ಟ್‌ ಗೇಟ್‌ಗಳನ್ನು ತೆಗೆದು 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರನ್ನು ಹರಿಸಲಾಗಿದೆ.

ಯಾರೂ ಕೂಡ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಸೆಲ್ಫಿ ತೆಗೆದುಕೊಳ್ಳಲು ತೆರಳಬಾರದು ಎಂದು ಸೂಚನೆ ನೀಡಲಾಗಿದೆ. ಸೇತುವೆ ಬಳಿ ಪೊಲೀಸರ ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿ ಜಾನುವಾರುಗಳನ್ನು ಮೇಯಿಸದಂತೆ, ತೆಪ್ಪ, ಮೋಟಾರ್ ದೋಣಿ ತೆಗೆದುಕೊಂಡು ನದಿಗೆ ಇಳಿಯದಂತೆ, ಹಳ್ಳಿಗಳಲ್ಲಿ ಡಂಗೂರ ಸಾರಲಾಗಿದೆ.

ಸಹಾಯವಾಣಿ ಕೇಂದ್ರ ಆರಂಭ

ಹವಾಮಾನ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಒಂದು ವಾರದವರೆಗೆ ಮಳೆ ಬಿಳುವ ಸಾಧ್ಯತೆ ಇದೆ. ಜನರ ನೆರವಿಗಾಗಿ ಇದೀಗ ಎಲ್ಲ ತಾಲ್ಲೂಕಿನಲ್ಲೂ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಆರಂಭಿಸಿದ್ದು, ಸಾರ್ವಜನಿಕರು ಜಿಲ್ಲಾಧಿಕಾರಿಗಳ ಸಹಾಯವಾಣಿ ಸಂಖ್ಯೆ 0853922501 ಗೆ ಕರೆ ಮಾಡಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಳೆ ಹಾನಿ; ಅಧಿಕಾರಿಗಳ ಭೇಟಿ

ಕಾರಟಗಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಬೆಳೆ ನೆಲಕ್ಕೊರಗಿದ್ದು, ಹಾನಿ ಪ್ರಮಾಣ ದಿನೇ, ದಿನೇ ಹೆಚ್ಚುತ್ತಿದೆ. ರೈತರ ಬದುಕು ಮೂರಾಬಟ್ಟೆಯಾಗಿದೆ. ತಾಲ್ಲೂಕಿನಾದ್ಯಂತ ವಿವಿಧ ಬೆಳೆಗಳು ನೆಲಕಚ್ಚಿವೆ. ಬೂದುಗುಂಪಾ ಮತ್ತು ಸಿದ್ದಾಪುರ ಸೀಮೆಯ ಭತ್ತ, ತೊಗರಿ, ಕಡಲೆ, ಮೆಕ್ಕಜೋಳ, ಬಿಳಿಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.

ರೈತರ ಜಮೀನುಗಳಲ್ಲಿ ಬೆಳೆ ಕೊಳೆತು ಹೋಗುತ್ತಿದೆ. ಕೆಲವೆಡೆ ಮೊಳಕೆಯೊಡೆದಿವೆ. ₹7,249 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಮಳೆಯ ಆರ್ಭಟ ಮುಂದುವರೆದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮಳೆಯನ್ನೂ ಲೆಕ್ಕಿಸದೇ ನಿರಂತರವಾಗಿ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ.

ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಶೀಲ್ದಾರ್ ರವಿ ಎಸ್.‌ ಅಂಗಡಿ, ಗ್ರೇಡಡ್‌–2 ತಹಶೀಲ್ದಾರ್‌ ವಿಶ್ವನಾಥ ಮುರಡಿ, ಉಪ ತಹಶೀಲ್ದಾರ್‌ ಪ್ರಕಾಶ ನಾಯಕ, ಕಂದಾಯ ನಿರೀಕ್ಷಕ ಸುರೇಶ, ಗ್ರಾಮ ಲೆಕ್ಕಾಧಿಕಾರಿಗಳು, ಸಿಬ್ಬಂದಿ ವಿವಿಧೆಡೆಯ ಬೆಳೆ ಹಾನಿಯನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.