ಅಳವಂಡಿ (ತಿಗರಿ): ಸಮೀಪದ ತಿಗರಿ ಗ್ರಾಮದಲ್ಲಿ ಭಾವೈಕ್ಯ ನಿಧಿ ಶಿರಹಟ್ಟಿಯ ಫಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದವು. ಭಕ್ತರು ನೈವೇದ್ಯ ಅರ್ಪಿಸಿದರು. ಬೆಳಿಗ್ಗೆ ಹಂದ್ರಾಳ ಗ್ರಾಮದಿಂದ ಬಂದಂತಹ ಫಕೀರೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು, ತುಂಗಾಭದ್ರಾ ನದಿಗೆ ತೆರಳಿ ಗಂಗಾಪೂಜೆ ಕಾರ್ಯಕ್ರಮ ನಡೆಯಿತು.
ಪಕೀರೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ಮತ್ತೆ ಗ್ರಾಮಕ್ಕೆ ತರಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಠವನ್ನು ಅಲಂಕಾರಿಕ ಹೂಗಳಿಂದ, ವಿದ್ಯುತ್ ದೀಪಗಳಿಂದ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೀರ್ಘದಂಡ(ದೀಡ) ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಸಂಜೆ ಲಘು ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಪಿಎಸ್ಐ ಪ್ರಹ್ಲಾದ್ ನಾಯಕ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಶಿರಹಟ್ಟಿಯ ಪಕೀರ ಸಿದ್ದರಾಮೇಶ್ವರ ಸ್ವಾಮೀಜಿ, ಹಂದ್ರಾಳದ ಫಕೀರ ಮರಿಸ್ವಾಮೀಜಿ, ಬಿಸರಳ್ಳಿಯ ಖಾಜಾಸಾಬ ಮೌಲ್ವಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಗ್ರಾಮಸ್ಥರಾದ ಭೀಮನಗೌಡ ಪೋಲಿಸ್ ಪಾಟೀಲ, ಸಂಗಪ್ಪ ಕವಲೂರು, ಬಾಳಪ್ಪ ಅಗಸಿಮನಿ, ಕೋಟ್ರೇಶ ಕಾತರಕಿ, ಸುರೇಶ ರಡ್ಡೇರ , ಭರಮಪ್ಪ ಅಂಬಳಿ, ರಾಮಣ್ಣ ಬಾರಕೇರ, ಶೇಖರಪ್ಪ ಅಗಸಿಮನಿ, ವೆಂಕಟೇಶ ಕವಲೂರು, ವೀರಭದ್ರ ಹಡಪದ, ಬಸಪ್ಪ ಗೌಡ್ರು, ಮಾರುತಿ ಅಂಬಿಗೇರ, ನಿಂಗಪ್ಪ ಮಡಿವಾಳ, ಉಮೇಶ, ದೇವಪ್ಪ, ವೀರೇಶ , ಹನುಮೇಶ, ಗೋಣೇಪ್ಪ, ರಮೇಶ, ಮಂಜು, ಗವಿ ಅಂಗಡಿ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.