ಕೊಪ್ಪಳ: ತಾಲ್ಲೂಕಿನಲ್ಲಿರುವ ಹುಲಿಗಿಯ ಹುಲಿಗೆಮ್ಮ ದೇವಿ ಕ್ಷೇತ್ರಕ್ಕೆ ಇತ್ತೀಚೆಗೆ ಕಳೆದ ಸೀಗೆ ಹುಣ್ಣಿಮೆ ಸಮಯದಲ್ಲಿ ಕನಿಷ್ಠ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದಾಗ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಪರದಾಡಬೇಕಾಯಿತು. ಅವ್ಯವಸ್ಥೆಯಿಂದಾಗಿ ಭಕ್ತರಿಗೆ ಹೆಚ್ಚು ಇದರ ಬಿಸಿ ತಟ್ಟಿತು.
ಮೊದಲು ಹುಲಿಗಿ ದೇವಸ್ಥಾನದ ಮುಖ್ಯದ್ವಾರದಿಂದ ದೇವಸ್ಥಾನದ ಹೋಗುವ ತನಕ ಮಾರ್ಗದ ಎರಡೂ ಬದಿಗಳಲ್ಲಿ ರಸ್ತೆಯ ಮೇಲೆಯೇ ವ್ಯಾಪಾರ ನಡೆಯುತ್ತಿದ್ದರು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಬರುವ ಲಕ್ಷಾಂತರ ಭಕ್ತರು ಪ್ರತಿಬಾರಿಯೂ ಸಮಸ್ಯೆ ಎದುರಿಸುತ್ತಲೇ ಇದ್ದರು. ಈ ಸಲದ ಮಂಗಳವಾರ ಮತ್ತು ಹುಣ್ಣಿಮೆ ಎರಡೂ ಒಂದೇ ದಿನ ಬಂದಿದ್ದರಿಂದ ಭಕ್ತರು ದೇವಿಯ ದರ್ಶನ, ಸುಲಭವಾಗಿ ಬಂದು ಸುರಕ್ಷಿತವಾಗಿ ಊರಿಗೆ ವಾಪಸ್ ಹೋಗಲು ಪ್ರಯಾಸ ಪಡಬೇಕಾಯಿತು. ಹುಣ್ಣಿಮೆಯ ಹಿಂದಿನ ದಿನ ಜಿಲ್ಲಾಕೇಂದ್ರದಲ್ಲಿ ಮುಖ್ಯಮಂತ್ರಿ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಿಯಲ್ಲಿ ನಿಯೋಜನೆಗೊಂಡಿರಲಿಲ್ಲ.
ಪ್ರವಾಹದ ರೀತಿಯಲ್ಲಿ ಜನ ಹುಲಿಗಿಗೆ ನುಗ್ಗಿ ಬಂದಿದ್ದರಿಂದ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಾಗ ಕಾಲ್ತುಳಿತ ಸಂಭವಿಸಿ ಪ್ರಾಣ ಕಳೆದುಕೊಂಡ, ತಿರುಪತಿಯಲ್ಲಿ ನಡೆದ ಘಟನೆ ಮತ್ತು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಆಯೋಜಿಸಿದ್ದ ರ್‍ಯಾಲಿ ವೇಳೆ ಮೃತಪಟ್ಟ ಘಟನೆಗಳು ನೆನಪಾಗಿದ್ದವು. ಈಗ ಮತ್ತೊಂದು ಅದೇ ರೀತಿಯಲ್ಲಿ ಹುಲಿಗಿಯಲ್ಲಿಯೂ ಕಾಲ್ತುಳಿತ ಸಂಭವಿಸುವ ಆತಂಕವೂ ಇತ್ತು.
ಕೂಡಿಬಂತು ಮುಹೂರ್ತ: ಹುಲಿಗಿ ದೇವಸ್ಥಾನಕ್ಕೆ ತೆರಳುವ ಮುಖ್ಯರಸ್ತೆ ವಿಸ್ತರಣೆ ಆಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಇದರಿಂದ ಸಮಸ್ಯೆ ಹೆಚ್ಚಾಗುತ್ತಲೇ ಹೋಗಿದ್ದರಿಂದ ಈ ಬಾರಿಯ ಜನಸಂದಣಿ ಕಂಡು ಅಧಿಕಾರಿಗಳು ರಾತ್ರೊ ರಾತ್ರಿ ಯೋಜನೆ ರೂಪಿಸಿ ಮೂರ್ನಾಲ್ಕು ದಿನಗಳಲ್ಲಿ ರಸ್ತೆ ಎರಡೂ ಬದಿಗಳಲ್ಲಿ ಇದ್ದ ಅಂಗಡಿಗಳನ್ನು ತೆರವು ಮಾಡಿ ವಿಶಾಲವಾದ ರಸ್ತೆ ಲಭಿಸಿತು. ಇದು ಅಲ್ಲಿಯ ಕೆಲ ವ್ಯಾಪಾರಿಗಳಿಗೆ ಬೇಸರ ಮೂಡಿಸಿದೆ.
ಹುಲಿಗಿ ರೀತಿಯಲ್ಲಿಯೇ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿಯೂ ಅದೇ ರೀತಿಯ ಪರಿಸ್ಥಿತಿ. ವಾಹನಗಳ ನಿಲುಗಡೆಗೆ ಒಂದೆಡೆ ವ್ಯವಸ್ಥೆ ಮಾಡಿ ಜಾಗ ಕಲ್ಪಿಸಲಾಗಿದ್ದರೂ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಮುಂಭಾಗದಿಂದ ತೆರಳುವ ಮಾರ್ಗದಲ್ಲಿ ರಸ್ತೆಯ ಬದಿಯಲ್ಲಿಯೇ ವ್ಯಾಪಾರ ಮಾಡುವ ಬಂಡಿಗಳ ಸುತ್ತಲೂ ಜನ ನೆರೆದಿರುತ್ತಾರೆ. ರಸ್ತೆಯ ಬಹುತೇಕ ಜಾಗವನ್ನು ವ್ಯಾಪಾರಿಗಳೇ ಆಕ್ರಮಿಸಿಕೊಳ್ಳುವ ಕಾರಣ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರತಿ ಶನಿವಾರ ಬಂದಾಗಲೆಲ್ಲ ಪ್ರವಾಸಿಗರಿಗೆ 575 ಮೆಟ್ಟಿಗಳನ್ನು ಏರಿ ಅಂಜನಾದ್ರಿ ದರ್ಶನ ಪಡೆಯುವುದು ಒಂದೆಡೆ ಸವಾಲು ಎನಿಸಿದರೆ, ಇನ್ನೊಂದೆಡೆ ಸಂಚಾರ ನಿರ್ವಹಣೆಯ ಅವ್ಯವಸ್ಥೆ ಕಾಡುತ್ತದೆ.
ಉತ್ತರ ಭಾರತದ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುವ ಅಂಜನಾದ್ರಿ ಸುತ್ತಲೂ ರಾಮಾಯಣದ ಐತಿಹ್ಯ ಹೊಂದಿರುವ ಪಂಪಾಸರೋವರ, ಆನೆಗೊಂದಿ, ಋಷ್ಯಮುಖ ಪರ್ವತ, ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ ಸಾಣಾಪುರ ಅಂಜನಾದ್ರಿಗೆ ಸಮೀಪದಲ್ಲಿಯೇ ಇವೆ. ನೆರೆಯಲ್ಲಿಯೇ ವಿಶ್ವವಿಖ್ಯಾತ ಹಂಪಿ ಇರುವ ಕಾರಣ ಅಲ್ಲಿಗೆ ಬಂದವರಲ್ಲಿ ಬಹುತೇಕರೂ ಗಂಗಾವತಿ ತಾಲ್ಲೂಕು ವ್ಯಾಪ್ತಿಯ ಪ್ರವಾಸಿ ಮತ್ತು ಅಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಾರೆ. ಅಂಥ ಪ್ರವಾಸಿಗರಿಗೆ ಸರಾಗ ಓಡಾಟದ, ಸುಲಭ ದರ್ಶನ ಸಿಗದಿದ್ದರೆ ಹೇಗೆ ಎಂದು ಪ್ರವಾಸಿಗರು ಪ್ರಶ್ನಿಸುತ್ತಾರೆ.
’ಅಂಜನಾದ್ರಿ ಕೇವಲ ಧಾರ್ಮಿಕ ತಾಣವಲ್ಲ, ಬೆಟ್ಟದ ಮೇಲೆ ನಿಂತುಕೊಂಡು ನೋಡಿದಾಗ ಕಾಣುವ ತುಂಗಭದ್ರಾ ನದಿಯ ರಮಣೀಯರ ಮತ್ತು ಹಂಪಿಯ ಸ್ಮಾರಕಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಹೀಗಾಗಿ ದೇಶ ಹಾಗೂ ವಿದೇಶಗಳ ಜನ ಬರುತ್ತಾರೆ. ಭಕ್ತರಿಗೆ ಸುಲಭ ಹಾಗೂ ಸುರಕ್ಷಿತ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಬೇಕು, ಬೆಟ್ಟ ಹತ್ತಿ ಇಳಿಯುವ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಸಂಚಾರ ದಟ್ಟಣೆಯಾಗದಂತೆ ಕ್ರಮ ವಹಿಸಬೇಕು’ ಎಂದು ಗದಗ ಜಿಲ್ಲೆಯಿಂದ ಬಂದಿದ್ದ ಭಕ್ತರಾದ ಹನುಮಂತಪ್ಪ ಗಾಣಿಗೇರ, ರವಿಚಂದ್ರ ನಾಯಕ ಹಾಗೂ ಇತರರು ಆಗ್ರಹಿಸಿದರು.
ಭಕ್ತರಿಗೆ ಅನುಕೂಲವಾಗುವಂತೆ ಅಂಗಡಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಒಂದಷ್ಟು ಸಮಯ ಕೊಟ್ಟಿದ್ದರೆ ಹೂಡಿಕೆ ಮಾಡಿದ್ದ ಒಂದಷ್ಟು ಹಣವಾದರೂ ಉಳಿಯುತ್ತಿತ್ತು. ದೇವರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಬೀಸಾಡಬೇಕಾಯಿತು.ವೆಂಕಟೇಶ್ ಹುಲಿಗಿಯ ಅಂಗಡಿ ಮಾಲೀಕ
ಭಕ್ತರ ಅನುಕೂಲಕ್ಕಾಗಿ ಹುಲಿಗಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಾಗ ವಿರೋಧಗಳ ಬರುವುದು ಸಹಜ.ರಾಘವೇಂದ್ರ ಹಿಟ್ನಾಳ ಕೊಪ್ಪಳ ಶಾಸಕ
ಅಂಜನಾದ್ರಿಯಲ್ಲಿಯೂ ಕಾರ್ಯಾಚರಣೆ; ಇಟ್ನಾಳ
ಹುಲಿಗಿಯಲ್ಲಿ ನಡೆಸಲಾದ ಕಾರ್ಯಾಚರಣೆಯಂತೆ ಅಂಜನಾದ್ರಿಯಲ್ಲಿಯೂ ಭಕ್ತರ ಸರಾಗ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು ’ಅಂಜನಾದ್ರಿ ಬೆಟ್ಟದ ಮುಂಭಾಗದಲ್ಲಿ ಓಡಾಡಲು ಇರುವ ರಸ್ತೆ ಸಣ್ಣದಾಗಿದ್ದು ಅಲ್ಲಿಯೇ ವ್ಯಾಪಾರಕ್ಕಾಗಿ ತಳ್ಳುಬಂಡಿಗಳು ನಿಲ್ಲುತ್ತವೆ. ಆದ್ದರಿಂದ ಬೈ ಪಾಸ್ ರಸ್ತೆ ನಿರ್ಮಿಸಲು ₹5.39 ಕೋಟಿಯ ಯೋಜನೆ ರೂಪಿಸಲಾಗಿದೆ. ಅಂಜನಾದ್ರಿಯ ಹಿಂಭಾಗದಿಂದ ಈ ರಸ್ತೆ ಬಂದು ಮರಳಿ ಆನೆಗೊಂದಿಗೆ ಹೋಗುವ ಮಾರ್ಗದಲ್ಲಿ ಸೇರುತ್ತದೆ. ಇದೇ ರಸ್ತೆ ಬಳಸಿ ಪಂಪಾಸರೋವರಕ್ಕೂ ತೆರಳಲು ಅನುಕೂಲಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.