ADVERTISEMENT

ಕೊಪ್ಪಳ | ಆಕಳು, ಆಡು ವ್ಯತ್ಯಾಸ ಗೊತ್ತಿಲ್ಲದ ಪೊಲೀಸರು: ನ್ಯಾಯಾಧೀಶರು ಗರಂ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 5:53 IST
Last Updated 2 ಜುಲೈ 2025, 5:53 IST
ನ್ಯಾಯಾಲಯ 
ನ್ಯಾಯಾಲಯ    

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪೊಲೀಸರು ಆಕಳು ಹಾಗೂ ಆಡು ಪ್ರಾಣಿಗಳ ವ್ಯತ್ಯಾಸ ಗೊತ್ತಿಲ್ಲದೇ ತಪ್ಪಾಗಿ ಪ್ರಕರಣ ದಾಖಲಿಸಿದ್ದು, ಪೊಲೀಸರ ಮೂರ್ಖತನದ ಪರಮಾವಧಿಗೆ ಈ ಪ್ರಕರಣ ಜ್ವಲಂತ ಉದಾಹರಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್‌ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು ಗರಂ ಆಗಿದ್ದಾರೆ.

ಆಗಿದ್ದೇನು: 2022ರ ಮಾರ್ಚ್‌ 3ರಂದು ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿದ್ದು ಟಾಟಾ ಏಸ್‌ ವಾಹನದಲ್ಲಿ ಮಂಜುನಾಥ ಹಾದಿಮನಿ ಎಂಬುವವರು ಆಡಿನ ಚರ್ಮವನ್ನು ಸಾಗಿಸುತ್ತಿದ್ದಾಗ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2020ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾಮಾನ್ಯವಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಎಂದು ಕರೆಯಲ್ಪಡುವ ಈ ಕಾಯ್ದೆಯಲ್ಲಿ ಆಡಿನ ಹತ್ಯೆಯ ಬಗ್ಗೆಯೂ ಪ್ರಕರಣ ದಾಖಲಿಸಿರುವುದು ವಿಪರ್ಯಾಸ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕಾಯ್ದೆ ಅಡಿಯಲ್ಲಿ ಜಾನುವಾರುಗಳ ಬಗ್ಗೆ ಪರಿಭಾಷೆ ನೀಡಿದ್ದು, ‘ಜಾನುವಾರುಗಳ ಎಂದರೆ ಎಲ್ಲ ವಯಸ್ಸಿನ ಆಕಳು, ಕರು, ಎತ್ತು ಹಾಗೂ 13 ವರ್ಷದ ಒಳಗಿನ ಎಮ್ಮೆ ಅಥವಾ ಕೋಣ’ ಎಂದು ಸ್ಪಷ್ಟವಾಗಿದೆ. ಆದರೂ ಪೊಲೀಸರು ಕಾನೂನಿನಲ್ಲಿರುವ ಪರಿಭಾಷೆಯನ್ನು ಸರಿಯಾಗಿ ಓದದೇ ತಪ್ಪಾಗಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಕಾನೂನಿನ ಪಂಡಿತರು ಹಾಗೂ ಜಾರಿ ಮಾಡುವವರು ಎಂದು ಹೇಳಲ್ಪಡುವ ಪೊಲೀಸರು ಈ ಕೆಲಸ ಮಾಡಿದ್ದಾರೆ. ಪ್ರಕರಣ ದಾಖಲಿಸುವುದಷ್ಟೇ ಅಲ್ಲದೇ ಅಂತಿಮ ವರದಿಯನ್ನೂ ಇದೇ ಕಾಯ್ದೆಯಡಿ ಸಲ್ಲಿಸಿ ಪೊಲೀಸರು ತಮ್ಮ ಮೂರ್ಖತನ ತೋರಿಸಿದ್ದಾರೆ ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.

ಸರಿಯಾದ ಕಾನೂನಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸದ ಕಾರಣ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಪ್ರಕರಣದ ಆದೇಶವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಬಳ್ಳಾರಿ ಐಜಿಪಿ ಅವರಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಪೊಲೀಸರಿಗೆ ತರಬೇತಿಯನ್ನೂ ನೀಡಬೇಕು ಎಂದು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.