ರೆಸಾರ್ಟ್‌ಗಳು ಮತ್ತು ಹೋಂ ಸ್ಟೆಗಳಲ್ಲಿ ಪರಿಶೀಲನೆ
ಗಂಗಾವತಿ: ತಾಲ್ಲೂಕಿನ ಸಾಣಾಪುರ ಕೆರೆ ಬಳಿ ಈಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೋಮವಾರ ರಾತ್ರಿ ಪೂರ್ತಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೆಗಳಲ್ಲಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಹಾಗೂ ಸಿಬ್ಬಂದಿ ಪರಿಶೀಲಿಸಿದರು.
ರಾತ್ರಿ ಎಂಟು ಗಂಟೆ ನಂತರ ಬೈಕ್ ಪಡೆದು ಸುತ್ತಾಡುವ ಪ್ರವಾಸಿಗರಿಂದಲೂ ಅಗತ್ಯ ದಾಖಲೆಗಳು, ವಾಹನದ ನಂಬರ್ ಪ್ಲೇಟ್ ಪರಿಶೀಲನೆಯನ್ನು ಪೊಲೀಸರು ನಡೆಸಿದರು. ಸರಿಯಾದ ದಾಖಲೆಗಳು ಇರದ 15 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಸಾಣಾಪುರ ಮತ್ತು ಬಸಾಪುರ ಗ್ರಾಮದ ರೆಸಾರ್ಟ್‌ಗಳಿಗೆ ತೆರಳಿ ರೆಸಾರ್ಟ್ ಪರವಾನಗಿ, ಪ್ರವಾಸಿಗರ ಆತಿಥ್ಯ ಮತ್ತು ಸುರಕ್ಷತೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು ಬರುವ ಮತ್ತು ಹೋಗುವ ಸಮಯ ಹೀಗೆ ಅನೇಕ ಮಾಹಿತಿಗಳು ಇರುವ ದಾಖಲೆಗಳನ್ನು ಪರಿಶೀಲಿಸಿದರು.
ನಂತರ ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಎಸ್.ಪಿ. ‘ಪ್ರವಾಸಿಗರ ಕುರಿತ ಮಾಹಿತಿ ಸ್ಪಷ್ಟವಾಗಿ ಪುಸ್ತಕಗಳಲ್ಲಿ ನಮೂದಿಸಿರಬೇಕು. ಆತಿಥ್ಯ ನೀಡುವಾಗ ಎಲ್ಲ ಪ್ರವಾಸಿಗರಿಂದ ಬಂದಿರುವ ಉದ್ದೇಶ, ಕೆಲಸದ ಮಾಹಿತಿ ಕುರಿತು ದಾಖಲೆಗಳ ಪ್ರತಿ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.
ಬಸಾಪುರ ಭಾಗದ ರೆಸಾರ್ಟ್‌ಗೆ ತೆರಳಿದಾಗ ಅಲ್ಲಿ ಪ್ರವಾಸಿಗರು ಮದ್ಯ ಸೇವನೆ ಮತ್ತು ಧೂಮಪಾನ ಮಾಡುತ್ತಿರುವ ಚಿತ್ರಣ ಕಂಡುಬಂದಾಗ ರೆಸಾರ್ಟ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಊಟಕ್ಕೆಂದು ಪ್ರವಾಸಿಗರು ಕುಟುಂಬದ ಸಮೇತ ಬರುತ್ತಾರೆ. ಇಂಥ ಸ್ಥಳದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.