ADVERTISEMENT

ಪೊಲೀಸ್ ಕರ್ತವ್ಯಕ್ಕೆ ಸಜ್ಜಾದ ತಾಯಂದಿರು

ಮನೆ ಕೆಲಸಕ್ಕೂ ಸೈ, ಸಮಾಜ ಕಾರ್ಯ ಜೈ ಎಂದ ಮಹಿಳೆಯರು

ಅನಿಲ್ ಬಾಚನಹಳ್ಳಿ
Published 14 ಜೂನ್ 2019, 19:30 IST
Last Updated 14 ಜೂನ್ 2019, 19:30 IST
ಮಗಳು ಆದ್ಯಳೊಂದಿಗೆ ನಂದಿನಿ
ಮಗಳು ಆದ್ಯಳೊಂದಿಗೆ ನಂದಿನಿ   

ಕೊಪ್ಪಳ: ಪೋಲಿಸ್‌ ಇಲಾಖೆಯ ಕಾನ್‌ಸ್ಟೆಬಲ್‌ ತರಬೇತಿ ಮುಗಿಸಿದ ಇಬ್ಬರು ತಾಯಂದಿರುಕರ್ತವ್ಯಕ್ಕೆ ಸಜ್ಜಾಗಿದ್ದಾರೆ.

ನಗರದಲ್ಲಿ ಮಂಗಳವಾರ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 7ನೇ ತಂಡದ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಇಬ್ಬರು ಪೊಲೀಸ್ ಪ್ರಶಿಕ್ಷಣಾರ್ಥಿಗಳು ಮಗುವಿನೊಂದಿಗೆ ಗಮನ ಸೆಳೆದರು.

ಪ್ರಶಿಕ್ಷಣಾರ್ಥಿ ಗಂಗಾವತಿಯ ಭಾಗ್ಯಲಕ್ಷ್ಮಿ ಒಂದು ಮಗುವಿನ ತಾಯಿ. ಗುಲಬುರ್ಗಾ ವಿಶ್ವವಿದ್ಯಾಲಯದಿಂದ ಬಿಪಿ.ಇಡಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೇ ಕ್ರೀಡೆಯಲ್ಲಿ 2 ಬಾರಿ ಯೂನಿವರ್ಸಿಟಿ ಬ್ಲ್ಯೂ ಆಗಿದ್ದಾರೆ. ಅಲ್ಲದೇ ಪ್ರಶಿಕ್ಷಣಾರ್ಥಿಗಳ ಕ್ರೀಡೆಯಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದಿದ್ದಾರೆ.

ADVERTISEMENT

‘ನನ್ನ ಓದಿಗೆ ಅತ್ತೆ, ಮಾವ, ಗಂಡ ಸೇರಿದಂತೆ ಮನೆಯವರ ಸಹಕಾರ ಇದೆ. ಹಾಗಾಗಿ ಪೊಲೀಸ್‌ ಆಗಬೇಕು ಎನ್ನುವ ಬಹಳಷ್ಟು ದಿನಗಳ ಆಸೆಯನ್ನು ಯಶಸ್ವಿಯಾಗಿ ‍ಪೂರೈಸಿದ್ದೇನೆ’ ಎನ್ನುತ್ತಾರೆ ಭಾಗ್ಯಲಕ್ಷ್ಮಿ.

ಬೆಂಗಳೂರಿನ ನಂದಿನಿ ಎಸ್. ಅವರಿಗೂ 4 ವರ್ಷದ ಆದ್ಯ ಎನ್ನುವ ಮಗುವಿದೆ. ಇವರು ಎಂಬಿಎ ವಿದ್ಯಾರ್ಹತೆ ಹೊಂದಿದ್ದಾರೆ. ಪ್ರಶಿಕ್ಷಣಾರ್ಥಿಗಳ ಹೊರಾಂಗಣ ಕ್ರೀಡೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಮೊದಲು ಇವರು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಉದ್ಯಮಿಯಾಗಿದ್ದಾರೆ.

‘ನನ್ನ ಗಂಡನಿಗೆ ಪೊಲೀಸ್‌ ಆಗಬೇಕು ಎನ್ನುವ ಆಸೆ ಇತ್ತು. ಅವರಿಗೆ ಆಗಲಿಲ್ಲ. ನನ್ನ ಓದಿಗೆ ಅವರು ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ’ ಎನ್ನುತ್ತಾರೆ ನಂದಿನಿ. ಭಾರವಾದ ಬಂದೂಕುಗಳನ್ನು ಹೊತ್ತು ಅವರು ಪರೇಡ್ ಮಾಡಿದರು.

ಉನ್ನತ ಶಿಕ್ಷಣ ಪಡೆದವರು ಹೆಚ್ಚು

ನಾಗರೀಕ ಪೊಲೀಸ್‌ ಹುದ್ದೆಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಇದೆ. 10 ಜನರನ್ನು ಹೊರತು ಪಡಿಸಿ ಉಳಿದೆಲ್ಲರೂ ಉನ್ನತ ವ್ಯಾಸಂಗ ಮಾಡಿದ್ದಾರೆ.

ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 7ನೇ ತಂಡದ 104 ಮಹಿಳಾ ಪ್ರಶಿಕ್ಷಣಾರ್ಥಿಗಳ ಪೈಕಿ 7 ಸ್ನಾತಕೋತ್ತರ ಪದವೀಧರರು, 76 ಪದವೀಧರರು, 7 ಜನ ಬಿ.ಇಡಿ ವಿದ್ಯಾರ್ಹತೆ, ಇಬ್ಬರು ಡಿ.ಇಡಿ ಮಾಡಿದ್ದಾರೆ.

**

ಬಡತನದ ಪರಿಸ್ಥಿತಿಯಲ್ಲಿಯೂ ಕಷ್ಟಪಟ್ಟು ಓದಿಸಿದ್ದೇವೆ. ನಮ್ಮ ಮಗಳೂ ಸಹ ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿದ್ದಾಳೆ. ಕೊನೆಗೂ ದೇವರ ದಯೆಯಿಂದ ಪೊಲೀಸ್‌ ನೌಕರಿ ಸಿಕ್ಕಿದ್ದು, ನಮ್ಮಮೇಲಿದೆ.
– ಮಂಗಳಮ್ಮ, ಪಾಲಕರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.