ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲ್ಲೂಕಿನ ಮುಸ್ಟೂರು ಗ್ರಾಮದ ಕವಿತಾ
ಗಂಗಾವತಿ (ಕೊಪ್ಪಳ ಜಿಲ್ಲೆ): ಮದುವೆಯಾಗಿ ಸುಂದರ ದಾಂಪತ್ಯ ಬದುಕಿನ ಸವಿ ಕನಸು ಕಂಡಿದ್ದ ಭಾವಿ ದಂಪತಿ ಹಾಗೂ ಎರಡೂ ಮನೆಗಳಲ್ಲಿ ಮನೆ ಮಾಡಿದ್ದ ಸಂಭ್ರಮ ಕ್ಷಣಾರ್ಧದಲ್ಲಿ ನುಚ್ಚುನೂರಾಗಿದ್ದು ಎರಡೂ ಕುಟುಂಬದವರಲ್ಲಿ ಸೂತಕದ ಛಾಯೆ ಮನೆಮಾಡಿದೆ.
ತಾಲ್ಲೂಕಿನ ದಾಸನಾಳ ಸಮೀಪದಲ್ಲಿ ಭಾನುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲ್ಲೂಕಿನ ಮುಸ್ಟೂರು ಗ್ರಾಮದ ಕವಿತಾ ಧಾರುಣವಾಗಿ ಮೃತಪಟ್ಟಿದ್ದಾರೆ. ಐದು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಗೆ ಡಿ. 21ರಂದು ಮದುವೆ ನಿಶ್ಚಿಯವಾಗಿತ್ತು.
ಮದುವೆ ನಿಶ್ಚಯವಾಗಿದ್ದ ಖುಷಿಯಲ್ಲಿಯೇ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲು ಯುವ ಜೋಡಿ ಮುನಿರಾಬಾದ್‌ನಲ್ಲಿರುವ ಪಂಪಾವನ, ಕೂಕನಪಳ್ಳಿಯ ಬೂದೇಶ್ವರ ದೇವಸ್ಥಾನ ಹೀಗೆ ಬೇರೆ ಬೇರೆ ಕಡೆ ತೆರಳಿದ್ದರು. ವಾಪಸ್ ಊರಿಗೆ ಬರುವಾಗ ನಡೆದ ಅಪಘಾತದಿಂದಾಗಿ ಎರಡೂ ಕುಟುಂಬದವರ ಕನಸುಗಳು ನುಚ್ಚುನೂರಾಗಿದ್ದವು. ವಿಷಯ ತಿಳಿಯುತ್ತಿದ್ದಂತೆ ದಿಗ್ಬ್ರಮೆಗೊಂಡ ಕುಟುಂಬ ಸದಸ್ಯರಲ್ಲಿ ಕೆಲವರು ಅಪಘಾತ ಸ್ಥಳ, ಇನ್ನೂ ಕೆಲವರು ಆಸ್ಪತ್ರೆ ಬಳಿ ಧಾವಿಸಿದರು.
ಮದುವೆಗಾಗಿ ತಯಾರಿ ಮಾಡಿಕೊಂಡಿದ್ದ ಕುಟುಂಬದವರಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ಕವಿತಾ ಮನೆಯ ಹಿರಿಯ ಮಗಳಾಗಿದ್ದು, ಒಬ್ಬ ತಮ್ಮನಿದ್ದಾನೆ. ರೈತಾಪಿ ಕುಟುಂಬದ ಅವರ ತಂದೆ ಮಗಳ ಮದುವೆಗೆ ಜೋರು ತಯಾರಿ ಮಾಡಿಕೊಂಡಿದ್ದರು. ಘಟನೆ ತಿಳಿದ ಬಳಿಕ ಸಂತಸ ತುಂಬಿದ್ದ ಮನೆಯಲ್ಲಿ ದುಃಖದ ಕಟ್ಟೆಯೊಡೆದಿತ್ತು. ಸೋಮವಾರ ರಾತ್ರಿಯಾದರೂ ಯುವತಿಯ ಮನೆಯಲ್ಲಿ ಯಾರೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಊಟವನ್ನೂ ಮಾಡಿರಲಿಲ್ಲ.
‘ಸಹೋದರಿಬ್ಬರೂ ಫೋಟೊ ಶೂಟ್‌ಗೆ ತೆರಳಿದ್ದರು. ಬಳಿಕ ರಮೇಶ ಊರಿಗೆ ಹೊದರೆ, ಕರಿಯಪ್ಪ ಭಾವಿ ಪತ್ನಿಯನ್ನು ಊರಿಗೆ ಬಿಡಲು ಹೊರಟಾಗ ದುರ್ಘಟನೆ ಸಂಭವಿಸಿದೆ. ಇನ್ನು ಕರಿಯಪ್ಪ ಹಾಗೂ ಕವಿತಾ ಮನೆಯವರಿಬ್ಬರೂ ಮದುವೆಗೆ ಮನೆಗೆ ಸುಣ್ಣಬಣ್ಣ ಮಾಡಿಸಿ, ಬಟ್ಟೆ ಖರೀದಿ, ಆಮಂತ್ರಣ ಪತ್ರಿಕೆ ಮುದ್ರಣ ಸೇರಿ ಬಹುತೇಕ ಮದುವೆಯ ಎಲ್ಲ ಕೆಲಸಗಳನ್ನು ಮುಗಿಸಿದ್ದರು. ಆದರೆ ವಿಧಿಯಾಟ ಮಾತ್ರ ಬೇರೆಯೇ ಇತ್ತು’ ಎಂದು ಜೋಡಿಯ ಸಂಬಂಧಿಕರಾದ ರಮೇಶ್ ಹಾಗೂ ಮಂಜುನಾಥ್ ಕಣ್ಣೀರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.